ರಾಮನಗರ:ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಯಲ್ಲಿ ನೀರು ನಿಂತಿದ್ದು, ಕೆರೆಯಂತಾಗಿದೆ. ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದೆ. ಎಕ್ಸ್‌ಪ್ರೆಸ್ ವೇಯಲ್ಲಿ ನಿಂತಿರುವ ಮಳೆ ನೀರಿಗೆ ಹಲವು ವಾಹನಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ವರದಿಯಾಗಿದೆ. ಅಲ್ಲದೇ ಕೆಲವೊಂದಿಷ್ಟು ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತಿವೆ ಎಂದು ತಿಳಿದು ಬಂದಿದೆ.
ಕಳೆದ ವರ್ಷವೂ ಮಳೆ ಸಂದರ್ಭ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ನಿನ್ನೆ ಸುರಿದ ಮಳೆಗೆ ರಸ್ತೆ ಮೇಲೆ ನೀರು ನಿಂತಿದ್ದು, ವಾಹನ ದಟ್ಟಣೆ ಉಂಟಾಗಿದೆ. ಇದು ವಾಹನ ಸವಾರರ ಆಕ್ರೋಶಕ್ಕೂ ಕಾರಣವಾಗಿದೆ. ಈ ಬಗ್ಗೆ ವಾಹನ ಸವಾರ ವಿಕಾಸ್ ಎಂಬುವವರು ಮಾತನಾಡಿ, "ರಸ್ತೆ ಮೇಲೆ ಹೆಚ್ಚಿನ ನೀರು ನಿಂತ ಹಿನ್ನೆಲೆ ವಾಹನಗಳು ಓಡಾಟಕ್ಕೆ ತೊಂದರೆ ಉಂಟಾಗಿದೆ. ನೀರು ನಿಂತ ಹಿನ್ನೆಲೆ ವಾಹನ ರಸ್ತೆ ಮಧ್ಯದಲ್ಲೆ ಕೆಟ್ಟು ನಿಂತಿದೆ. ಈ ವೇಳೆ ಹಿಂದಿನಿಂದ ಬಂದ ವಾಹನ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನ ಜಖಂ ಗೊಂಡಿದೆ. ಇದಕ್ಕೆ ಪರಿಹಾರ ಕೊಡಬೇಕೆಂದು ಸಿಎಂಗೆ ಮನವಿ ಮಾಡುವುದಾಗಿ" ಹೇಳಿದರು.
ಮತ್ತೊಬ್ಬ ವಾಹನ ಸವಾರ ನಾಗರಾಜ್ ಎಂಬುವವರು ಮಾತನಾಡಿ, "ನಿನ್ನೆ ರಾತ್ರಿ ಸುರಿದ ಮಳೆಗೆ ಈ ರಸ್ತೆಯಲ್ಲಿ ಸುಮಾರು ವಾಹನ ಸವಾರರು ಸಂಕಷ್ಟ ಅನುಭವಿಸಿದ್ದಾರೆ. ನನ್ನ ವಾಹನದ ಇಂಜಿನ್ ಒಳಗಡೆ ನೀರು ಹೋದ ಕಾರಣ ವಾಹನ ಕೆಟ್ಟು ನಿಂತಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಮಾ.12ನೇ ತಾರೀಖಿನಂದು ಬೆಂಗಳೂರು ಮೈಸೂರ ಎಕ್ಸ್‌ಪ್ರೆಸ್ ವೇ ಗೆ ಪ್ರಧಾನಿ ಮೋದಿ ಮಂಡ್ಯ ಜಿಲ್ಲೆಯಲ್ಲಿ ಚಾಲನೆ ನೀಡಿದ್ದರು.
ಮಳೆ ಬಂದರೇ ಏನು ಆಗುವುದಿಲ್ಲ ಎಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇಷ್ಟೆಲ್ಲಾ ಸಮಸ್ಯೆ ಆದರೂ ಸ್ಥಳಕ್ಕೆ ಬಂದಿಲ್ಲ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು- ಬೆಂಗಳೂರು ದಶಪಥ ಬಗೆಗಿನ ಟೀಕೆಗೆ ಸಿಎಂ ಬೊಮ್ಮಾಯಿ ಸ್ಪಷ್ಟನೆ:ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಪ್ರಶ್ನೆಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಎಕ್ಸ್‌ಪ್ರೆಸ್ ವೇ ಇಡೀ ದೇಶವೆ ಹೆಮ್ಮೆ ಪಡಬೇಕಾದ ಕಾಮಗಾರಿ, ಇಡೀ ದೇಶವೇ ಮೈಸೂರಿಗೆ ಕನೆಕ್ಟ್ ಆಗಲಿದ್ದು, ಇಂಥ ಮಹತ್ವದ ಕೆಲಸಗಳಿಗೆ ಪ್ರಧಾನಿ ಮೋದಿ ಅವರನ್ನು ಕರೆಸದೇ ಬೇರೆ ಯಾವುದಕ್ಕೆ ಕರೆಸಬೇಕು? ಮೊದಲ ಮಳೆ ಬಂದ ಬಳಿಕ ಸಣ್ಣಪುಟ್ಟ ಸಮಸ್ಯೆ ಆಗಲಿದ್ದು, ಶೀಘ್ರವೇ ಎಲ್ಲ ಸಮಸ್ಯೆ ನಿವಾರಣೆ ಆಗಲಿದೆ, ಅಲ್ಲಲ್ಲಿ ಆಗಿರುವ ಎಲ್ಲ ಗೊಂದಲಗಳನ್ನು ಬಗೆಹರಿಸಲಾಗುವುದು ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದ್ದಾರೆ. ಇದೇ ವೇಳೆ ವಿಪಕ್ಷಗಳ ಟೀಕೆಗೂ ಸಿಎಂ ತಿರುಗೇಟು ಕೊಟ್ಟಿದ್ದಾರೆ.
ಹೆದ್ದಾರಿ ಪ್ರಾಧಿಕಾರದಿಂದ ಕ್ರಮ: 'ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿನ ಒಳಚರಂಡಿ ಸಮಸ್ಯೆ ಬಗೆಹರಿಸಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣದ ಕ್ರಮ ಕೈಗೊಂಡಿದೆ. ಈ ಪ್ರದೇಶದಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಿದೆ. ಕೆಲ ಗ್ರಾಮಸ್ಥರು ಒಳಚರಂಡಿ ಮಾರ್ಗ ಬಂದ್ ಮಾಡಿದ್ದರಿಂದ ಅಂಡರ್ಪಾಸ್ನಲ್ಲಿ ನೀರು ನಿಂತಿತ್ತು. ಸದ್ಯ ಚರಂಡಿ ಪೈಪ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ರಾತ್ರಿ 11.30ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ' ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಸಕ್ಕರೆ ನಾಡಲ್ಲಿ ಮೋದಿಗೆ ಅಕ್ಕರೆಯ ಸ್ವಾಗತ: ಭರ್ಜರಿ ರೋಡ್ ಶೋ, ಹೂವಿನ ಸುರಿಮಳೆ!- ವಿಡಿಯೋ