ರಾಮನಗರ:ಪಿಎಸ್ಐ ಹಗರಣದ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ. ಪೊಲೀಸ್ ಇಲಾಖೆಯಿಂದಲೇ ಅಕ್ರಮ ಬಯಲಾಗಿದೆ. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ದೊಡ್ಡ ಕಥೆ ಇದೆ. ಕಾಂಗ್ರೆಸ್ ನಾಯಕರ ಬಳಿ ದಾಖಲೆ ಎಲ್ಲಿದೆ? ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಸತ್ಯ. ಅಶ್ವತ್ಥ ನಾರಾಯಣ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ದಾಖಲೆ ಎಲ್ಲಿದೆ?. ಬಿಜೆಪಿಯ ಒಬ್ಬ ವಕ್ತಾರ ಕಮಲ್ ಪಂತ್ ವಿರುದ್ಧ ಚಾಮರಾಜಪೇಟೆಯಲ್ಲಿ ನಡೆದ ಕೊಲೆಯ ವಿಚಾರವಾಗಿ ಆರೋಪ ಮಾಡಿದ್ದರು. ಪೊಲೀಸ್ ಇಲಾಖೆ ಅಪಘಾತ ಎಂದು ಹೇಳಿತ್ತು. ಆದರೆ ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಗಲಾಟೆಯಾಗಿ ಕೊಲೆಯಾಗಿದೆ ಎಂದು ಕಥೆ ಕಟ್ಟಿದ್ದರು. ಅಲ್ಲಿಂದ ಪಿಎಸ್ಐ ಅಕ್ರಮ ವಿಚಾರ ಬಯಲಾಗಿದೆ ಎಂದರು.
ಬಿಜೆಪಿಯ ವ್ಯಕ್ತಿಯೋರ್ವ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಮೇಲೆ ಆರೋಪ ಮಾಡಿದ್ದರು. ಆ ವ್ಯಕ್ತಿಗೆ ಈಗ ಕಲಬುರಗಿಯಲ್ಲಿ ಅರೆಸ್ಟ್ ಆಗಿರುವವರ ಸಂಪರ್ಕವಿತ್ತು. ಇದು ದೊಡ್ಡ ಕಥೆ ಇದೆ. ಎಲ್ಲರೂ ದುಡ್ಡು ಕೊಟ್ಟು ಪಿಎಸ್ಐ ಆಗಿದ್ದಾರೆ ಎನ್ನಲು ಆಗಲ್ಲ. ಶೇ. 30ರಷ್ಟು ದುಡ್ಡು ಕೊಟ್ಟು, ಶೇ.30- 40 ರಷ್ಟು ಮಂದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು. ಬಿಜೆಪಿ ನಾಯಕರು ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂತ್‌ಗೆ ಅವಮಾನ ಮಾಡಿದ್ದರು. ಅದಕ್ಕಾಗಿ ಅವರ ಅಭಿಮಾನಿಗಳು ಸರ್ಕಾರಕ್ಕೆ ಬುದ್ಧಿ ಕಲಿಸಲು ಅಕ್ರಮವನ್ನು ಹೊರತೆಗೆದಿದ್ದಾರೆ. ಇದು ಸರ್ಕಾರದಿಂದ ಹೊರಬಂದಿಲ್ಲ.
ಅಶ್ವತ್ಥ ನಾರಾಯಣ ವಿರುದ್ಧ ಅವರ ಜೊತೆಯಲ್ಲಿದ್ದವರೇ ಮಾಧ್ಯಮಕ್ಕೆ ಮಾಹಿತಿ ಕೊಟ್ಟಿದ್ದಾರೆ. ಅಮಿತ್ ಶಾ ಆಗಮಿಸುತ್ತಿದ್ದರಿಂದ ಇದನ್ನು ತೆರೆದಿಡಲು ಹಾಗೂ ಅಮಿತ್ ಷಾ ತಲೆಗೆ ಹೋಗಲಿ ಎಂದು ಅಶ್ವತ್ಥ ನಾರಾಯಣ ವಿರುದ್ಧ ಮಾಹಿತಿ ನೀಡಿದ್ದಾರೆ. ಇವರ ವಿಕೆಟ್ ಉರುಳಿಸಲು ಬಿಜೆಪಿಯಲ್ಲಿಯೇ ಕುತಂತ್ರ ನಡೆದಿದೆ. ಬಿಜೆಪಿಯವರು ಅವರ ಮನೆಗೆ ಅವರೇ ಬೆಂಕಿ ಹಚ್ಚಿಕೊಳ್ಳುತ್ತಾರೆ. ನಾವು ಹಚ್ಚಬೇಕಿಲ್ಲ ಎಂದರು.