ರಾಮನಗರ:ಶವಸಂಸ್ಕಾರಕ್ಕೆ ಸ್ಮಶಾನ ಜಾಗವಿಲ್ಲದ ಕಾರಣ ಶವವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟಿಸಿದ ಘಟನೆ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ. ಸ್ಮಶಾನ ಜಾಗವನ್ನು ಶೀಘ್ರವೇ ಗುರುತಿಸಲಾಗುವುದು ಎಂದು ಅಧಿಕಾರಿಗಳು ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿದೆ.
ವಿವರ:ತಾಲೂಕಿನ ಕನ್ನಮಂಗಲ ಗ್ರಾಮದ ರೈತ ಸ್ವಾಮಿ ಎಂಬಾತ ಇಂದು ಮೃತಪಟ್ಟಿದ್ದಾನೆ. ಗ್ರಾಮದಲ್ಲಿ ಶವಸಂಸ್ಕಾರ ಮಾಡಲು ಸ್ಮಶಾನ ಜಾಗವಿಲ್ಲದ ಕಾರಣ ಗ್ರಾಮಸ್ಥರೆಲ್ಲರೂ ಒಗ್ಗೂಡಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಆಗಮಿಸಿದ್ದರು. ಈ ವೇಳೆ, ಪೊಲೀಸರು ಪ್ರತಿಭಟನಾಕಾರರನ್ನು ಪಾರೇದೊಡ್ಡಿ ಗ್ರಾಮದಲ್ಲಿ ತಡೆದಿದ್ದಾರೆ.
ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಅಲ್ಲಿಯೇ ರಸ್ತೆಯ ಮೇಲೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಕೆಲ ದಿನಗಳಿಂದ ಕಣ್ವ ನದಿ ದಡದಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿತ್ತು. ಇದೀಗ ಕಣ್ವ ಅಣೆಕಟ್ಟು ತುಂಬಿರುವ ಕಾರಣ ಶವ ಸಂಸ್ಕಾರ ಮಾಡಲು ಜಾಗವಿಲ್ಲದಂತಾಗಿದೆ. ಸ್ಮಶಾನಕ್ಕಾಗಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ನಾಗೇಶ್ ಮಧ್ಯ ಪ್ರವೇಶಿಸಿ ಕೂಡಲೇ ಶವಸಂಸ್ಕಾರ ಮಾಡಲು ಜಾಗವನ್ನು ನಿಗದಿಪಡಿಸಲಾಗುವುದು ಆಶ್ವಾಸನೆ ನೀಡಿ, ಮನವೊಲಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರು.
ಓದಿ:ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು