ಕರ್ನಾಟಕ

karnataka

ETV Bharat / state

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ - ಕಣಮಿಣಿಕೆ ಟೋಲ್ ಪ್ಲಾಜಾ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ದುಬಾರಿ ಟೋಲ್ ದರ ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪೊಲೀಸರು ಜೆಡಿಎಸ್ ಕಾರ್ಯಕರ್ತರು ಮತ್ತು ​ಮುಖಂಡರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

protest
ಪ್ರತಿಭಟನೆ

By

Published : Mar 16, 2023, 1:03 PM IST

Updated : Mar 16, 2023, 1:17 PM IST

ಟೋಲ್ ದರ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಮತ್ತು ​ಮುಖಂಡರ ಪ್ರತಿಭಟನೆ

ರಾಮನಗರ: ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ದಶಪಥ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾಗಡಿ ಜೆಡಿಎಸ್ ಶಾಸಕ ಮಂಜುನಾಥ್​ ಸೇರಿದಂತೆ ಕಾರ್ಯಕರ್ತರು ಮತ್ತು ​ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ರಾಮನಗರದ ಹೊರವಲಯದ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಟೋಲ್ ಪ್ಲಾಜಾ ಬಳಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಹೆದ್ದಾರಿ ಮಧ್ಯದಲ್ಲಿ ಕುಳಿತು ಪಟ್ಟು ಹಿಡಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ:ಬಿಎಂಟಿಸಿ ಇವಿ ಬಸ್​ಗಳ ಫಾಸ್ಟ್​ಟ್ಯಾಗ್​​ ​ಸಮಸ್ಯೆ: ಟೋಲ್​ನಲ್ಲಿ ಬಸ್​ಗಳ ಪರದಾಟ

ಸರ್ವಿಸ್ ರಸ್ತೆ ಇಲ್ಲದೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಫಾಸ್ಟ್ ಟ್ಯಾಗ್ ಇದ್ದರೆ 135 ರೂ. ಕಟ್ಟಬೇಕು, ಫಾಸ್ಟ್ ಟ್ಯಾಗ್ ಇಲ್ಲದಿದ್ದರೇ ಡಬಲ್ ಹಣ ಕಟ್ಟಬೇಕು. 50 ಕಿ.ಮಿ ವ್ಯಾಪ್ತಿಯಲ್ಲಿ ಆಸ್ಪತ್ರೆ ಇರಬೇಕು. ಹೈವೇಯಲ್ಲಿ ಶೌಚಾಲಯ ಇಲ್ಲ. ಹೀಗಾಗಿ, ಟೋಲ್ ಸಂಗ್ರಹ ವಿರೋಧಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಕೂಡಲೇ ರಾಷ್ಟ್ರೀಯ ಪ್ರಾಧಿಕಾರದ ಟೋಲ್ ಸಂಗ್ರಹ ನಿಲ್ಲಿಸಿ, ಮೊದಲು ಮೂಲಭೂತ ಸಮಸ್ಯೆಗಳನ್ನ ನಿವಾರಿಸಿ, ನಂತರ ಟೋಲ್ ಸಂಗ್ರಹ ಮಾಡಬೇಕೆಂದು ನಿಖಿಲ್​ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ:ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ: ಸರ್ವಿಸ್ ರಸ್ತೆ ಬಗ್ಗೆ ಅಧಿಕಾರಿ ಮಾಹಿತಿ

ಇನ್ನು ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಹೆದ್ದಾರಿ ಟೋಲ್ ರಸ್ತೆ ಎಂದು ಎಲ್ಲರಿಗೂ ತಿಳಿದಿದೆ. ಹೀಗೆ ಪ್ರತಿಭಟನೆ ಮಾಡುತ್ತಿರುವುದು ಜನ ಸಾಮಾನ್ಯರಲ್ಲ, ಈ ವಿಚಾರವನ್ನು ಉದ್ದೇಶಪೂರ್ವಕವಾಗಿಯೇ ರಾಜಕೀಯಗೊಳಿಸುತ್ತಿದ್ದಾರೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುತ್ತಿದ್ದಾರೆ. ನಾವು ಕಾನೂನಿನ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಸರ್ವಿಸ್ ರಸ್ತೆಯಲ್ಲಿ ಟೋಲ್ ಫ್ರೀಯಾಗಿ ಸಂಚಾರಕ್ಕೆ ಬಿಟ್ಟಿದ್ದೇವೆ. ಆದರೂ, ವಿನಾಕಾರಣ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ

ನಿನ್ನೆ ನಡೆದ ಪ್ರತಿಭಟನೆ: ಇನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ದುಬಾರಿ ಟೋಲ್ ದರ ವಿರೋಧಿಸಿ ಕಾಂಗ್ರೆಸ್​​ ಮತ್ತು ಕನ್ನಡ ಪರ ಸಂಘಟನೆಯ ಹೋರಾಟಗಾರರು ನಿನ್ನೆ ಕೂಡ ಪ್ರತಿಭಟನೆ ನಡೆಸಿದ್ದರು. ಬಿಡದಿಯ ಶೇಷಗಿರಿಹಳ್ಳಿ ಬಳಿಯ ಟೋಲ್ ಪ್ಲಾಜಾ ಮುಂಭಾಗ ಸೇರಿದ ಅವರು, ಕಪ್ಪು ಬಾವುಟ ಪ್ರದರ್ಶಿಸಿ ರಸ್ತೆ ತಡೆ ನಡೆಸಿದರು. ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದರು.

Last Updated : Mar 16, 2023, 1:17 PM IST

ABOUT THE AUTHOR

...view details