ರಾಮನಗರ :ಸರಕಾರಿ ಇಲಾಖೆಗಳು ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಡಳಿತ ವ್ಯವಸ್ಥೆಯಲ್ಲಿ ಆದ್ಯತೆ ಮೇಲೆ ಕನ್ನಡವನ್ನು ಬಳಸಬೇಕು. ಈ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಟಿ ಎಸ್ ಅವರು ಹೇಳಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲಾಖೆಗಳಲ್ಲಿ ಇ-ಕಚೇರಿ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಆಂಗ್ಲ ಪದಗಳ ಬಳಕೆ ಕಡಿಮೆಗೊಳಿಸಲು ಕನ್ನಡದ 68 ನಿಘಂಟುಗಳನ್ನು ಪದ ಕಣಜ ಎಂಬ ವೆಬ್‌ಸೈಟ್ ಅನ್ನು ರಚಿಸಲಾಗಿದೆ.
ಆಡಳಿತದಲ್ಲಿ ಬಳಸುವ 66000 ಕ್ಲಿಷ್ಟಕರವಾದ ಆಂಗ್ಲ ಪದವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ ಎಂದು ಹೇಳಿದರು. ಕೆಲವು ಸಂದರ್ಭಗಳಲ್ಲಿ ಆಂಗ್ಲ ಪದವನ್ನು ಅನುವಾದಿಸದೇ ಕನ್ನಡದಲ್ಲೇ ಬರೆಯಲಾಗುತ್ತಿದೆ. ಕನ್ನಡ ಪದವನ್ನು ಹೆಚ್ಚು ಬಳಸಲು ಅನುಕೂಲವಾಗುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅನುವಾದ ಕಮ್ಮಟಗಳನ್ನು ಆಯೋಜಿಸುತ್ತಿದೆ ಎಂದರು.
ನಮ್ಮ ಭಾಷೆ ಕನ್ನಡವನ್ನು ಪ್ರೀತಿಯಿಂದ ಗೌರವಿಸಬೇಕು. ಕನ್ನಡ ಬಳಕೆಯನ್ನು ಹೆಚ್ಚಿಸಲು ನಾವು ಪ್ರಯತ್ನಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಉದ್ದಿಮೆ ಪರವಾನಿಗೆ ನೀಡುವಾಗ, ಈ ಉದ್ದಿಮೆಗಳು ಕನ್ನಡದಲ್ಲಿ ನಾಮಫಲಕ ಹೊಂದುವುದನ್ನು ಕಡ್ಡಾಯಗೊಳಿಸುವುದರ ಜೊತೆಗೆ ಅವುಗಳು ಪಾಲನೆಯಾಗುತ್ತಿರುವುದನ್ನು ಪರಿಶೀಲಿಸಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದವರು ಹೊಸ ಬಡಾವಣೆಗಳಿಗೆ ಮಂಜೂರಾತಿ ನೀಡುವಾಗ ಹೊಸ ಬಡಾವಣೆಗಳಲ್ಲಿ ಕನ್ನಡಕ್ಕಾಗಿ ದುಡಿದ ಮಹನೀಯರ ಹೆಸರುಗಳನ್ನು ರಸ್ತೆ, ವೃತ್ತಗಳಿಗೆ ಇಡುವಂತೆ ಮನವಿ ಮಾಡಿ ಎಂದರು. ಔಷಧಿಗಳ ಜೊತೆಯಲ್ಲಿ ಔಷಧಿಯಲ್ಲಿರುವ ವಸ್ತುಗಳ ವಿವರದ ಚೀಟಿಯನ್ನು ಪರಿಶೀಲಿಸಿದರೆ ಅದರಲ್ಲಿ ಆಂಗ್ಲ, ಹಿಂದಿ ಭಾಷೆಯನ್ನು ಬಳಸಲಾಗುತ್ತದೆ.