ರಾಮನಗರ:ನಮ್ಮ ಪಕ್ಷದಿಂದ ರಾಜಕೀಯ ಬದುಕು ಆರಂಭಿಸಿ, ನಂತರ ಅನ್ಯ ಪಕ್ಷಗಳಿಗೆ ಜಿಗಿದು ಕೊನೆಗೆ ಮಾತೃ ಪಕ್ಷದ ವಿರುದ್ಧವೇ ಮಾತನಾಡುವುದು ತೀರಾ ಹಾಸ್ಯಾಸ್ಪದ ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಟಾಂಗ್ ನೀಡಿದ್ದಾರೆ.
ಬಿಡದಿಯಲ್ಲಿ ಇಂದು ನಡೆದ ಯುವ ಜೆಡಿಎಸ್ ಕಾರ್ಯಾಗಾರದಲ್ಲಿ ಮುಂದಿನ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುವುದಾಗಿ ಇಬ್ಬರು ನಾಯಕರು ಶಪಥ ಮಾಡಿದ್ದಾರೆ.
ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದ ಅವರು, ಬೆಳೆದು ಬಂದ ಪಕ್ಷದ ಬಗ್ಗೆ ಅವರು ಮಾತಾಡಬಾರದು. ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಸ್ಥಿತಿ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ಅವರು ಮಾತನಾಡಲಿ. ಕುಮಾರಸ್ವಾಮಿ ಅವರ ಸರ್ಕಾರವನ್ನು ಟೀಕೆ ಮಾಡುವ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರ ಸ್ಥಿತಿ ಹೇಳತೀರದಾಗಿತ್ತು. ಅದು ಎಲ್ಲರಿಗೂ ಗೊತ್ತಿದೆ ಎಂದರು.
ನಮ್ಮೆಲ್ಲರ ಹಿರಿಯರಾದ ಹೆಚ್.ಡಿ.ದೇವೇಗೌಡರು ಪಕ್ಷವನ್ನು ಯಾವ ರೀತಿ ಕಟ್ಟಿದರು ಅನ್ನೋದನ್ನು ನಾವೆಲ್ಲರೂ ಅರಿಯಬೇಕು. ಪಕ್ಷ ಕಟ್ಟಲು ಎಷ್ಟು ಶ್ರಮ ಪಟ್ಟರು ಎಂಬುದು ನನಗೆ ಗೊತ್ತಿದೆ. ನಮ್ಮದು ಒಂದು ಜಾತಿಗೆ ಸೇರಿದ ಪಾರ್ಟಿಯಲ್ಲ ಎಂದು ತಿಳಿಸಿದರು.
'ನಮ್ಮಲ್ಲಿ ಹೈಕಮಾಂಡ್ ಇಲ್ಲ'
ಸ್ಥಳೀಯವಾಗಿ ನಮ್ಮ ಪಕ್ಷ ಬಲಿಷ್ಠವಾಗಿದೆ. ಇನ್ನಷ್ಟು ಬಲಗೊಳಿಸಲು ಕೆಲಸ ಮಾಡಬೇಕಿದೆ. ಬೇರೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಬೇಕು. ಆದರೆ ನಮ್ಮ ಪಕ್ಷದಲ್ಲಿ ವರಿಷ್ಠರನ್ನು ಭೇಟಿ ಮಾಡಬೇಕು ಅಂದರೆ ಬೆಂಗಳೂರು ಸಾಕು ಎಂದು ಪ್ರಜ್ವಲ್ ಎಂದರು.