ರಾಮನಗರ:ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಪೊಲೀಸರು ಬಡಜನರ ಕಷ್ಟ ನೀಗಿಸಲು ಮುಂದಾಗಿದ್ದಾರೆ. ದಾನಿಗಳ ನೆರವು ಹಾಗೂ ಅವರಿಗೆ ಬರುವ ಸಂಬಳದ ಹಣದಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸಿ ಬಡ ಕುಟುಂಬಗಳಿಗೆ ಹಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ಬೀದಿ ಬದಿಯಲ್ಲಿರುವ ಜನರಿಗೆ ಊಟದ ವ್ಯವಸ್ಥೆ ಸಹ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿಯಿಂದ ಬಡವರಿಗೆ ಆಹಾರದ ಕಿಟ್ ವಿತರಣೆ.. ಬಡವರಿಗೆ ಆಹಾರದ ಕಿಟ್ ವಿತರಿಸಿದ ಸರ್ಕಲ್ ಇನ್ಸ್ಪೆಕ್ಟರ್:
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಒಳಪಡುವ ಕಗ್ಗಲೀಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೇದಾರ್ ಸಿಬ್ಬಂದಿ ಹಾಗೂ ದಾನಿಗಳ ನೆರವಿನಿಂದ ಕೆಲಸವಿಲ್ಲದೆ ಮನೆಯಲ್ಲೇ ಇರುವ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಸವಿತ ಸಮಾಜದ ಜನರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಇರುವ ಆಟೋ ಚಾಲಕರ ಮಾಹಿತಿ ಪಡೆದು ಟೋಕನ್ ಕೊಟ್ಟು ಅವರಿಗೆ ಕಿಟ್ ನೀಡುತ್ತಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಆಹಾರದ ಕಿಟ್ ವಿತರಣೆ:
ಸರ್ಕಲ್ ಇನ್ಸ್ಪೆಕ್ಟರ್ ರಾಮಪ್ಪ ಮಾಡುತ್ತಿರುವ ಕೆಲಸಕ್ಕೆ ಎಸ್ಪಿ ಗಿರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲೇ ಮಧ್ಯಾಹ್ನದ ಸಮಯದಲ್ಲಿ ಬೀದಿ ಬದಿಯಲ್ಲಿರುವ ಜನರು, ಬಡವರು ಹಾಗೂ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಲಾಕ್ಡೌನ್ ಆರಂಭವಾದ ದಿನದ ಆರಂಭವಾದ ಈ ಕೆಲಸ ಇನ್ನು ಮುಂದುವರೆಯುತ್ತಿದೆ. ಕೇವಲ ಕೆಲಸ ಇಲ್ಲದ ಜನರಿಗೆ ಮಾತ್ರವಲ್ಲದೆ ಠಾಣೆಯ ಸಿಬ್ಬಂದಿಗಳಿಗೂ ಸಹ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ ಹಾಗೂ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಎಸ್ಪಿ ಗಿರೀಶ್ ತಮ್ಮ ಸಿಬ್ಬಂದಿಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು.
ಒಟ್ಟಾರೆಯಾಗಿ ಸಂಕಷ್ಟದಲ್ಲಿರುವ ಬಡ ಜನರಿಗೆ ಊಟದ ಜತೆಗೆ ಆಹಾರದ ಕಿಟ್ ವಿತರಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.