ರಾಮನಗರ: ನಿಷೇಧಾಜ್ಞೆ ಉಲ್ಲಂಘಿಸಿ ಅನಧಿಕೃತವಾಗಿ ಪಾರ್ಟಿ ನಡೆಸುತ್ತಿದ್ದ ರೆಸಾರ್ಟ್ ಮೇಲೆ ಶುಕ್ರವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಮನಗರದ ಕಣ್ವ ಜಲಾಶಯ ಬಳಿಯ ನೂತನವಾಗಿ ನಿರ್ಮಿಸಲಾಗಿರುವ ಟ್ರೀಕ್ಯೂಟ್ರಾ ರೆಸಾರ್ಟ್ ಮೇಲೆ ದಾಳಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ರೆಸಾರ್ಟ್ ಮೇಲೆ ರಾಮನಗರ ಎಸ್‌ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ನಿಷೇಧಾಜ್ಞೆ ಇದ್ದರೂ ಲೆಕ್ಕಿಸದೇ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆನ್ಲೈನ್ ಬುಕ್ಕಿಂಗ್ ಮೂಲಕ ನೂತನ ವರ್ಷದ ಆಚರಣೆಗೆ ಡಿಜೆ ಮ್ಯೂಸಿಕ್ನೊಂದಿಗೆ ಪಾರ್ಟಿ ಆಯೋಜಿಸಲಾಗಿದ್ದು, ಸಾವಿರಾರು ಜನರು ಪಾಲ್ಗೊಂಡಿದ್ದರು. ಬೆಂಗಳೂರು, ಮತ್ತಿತರ ಕಡೆಯಿಂದ ಜನರು ಪಾರ್ಟಿಗೆ ಬಂದಿದ್ದರು. ಅದರಲ್ಲೂ ಯುವಕ, ಯುವತಿಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಮೋಜುಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ರಾಮನಗರದ ರೆಸಾರ್ಟ್ ಮೇಲೆ ಪೊಲೀಸರ ದಾಳಿ ಈ ಬಗ್ಗೆ ರೆಸಾರ್ಟ್ ಮಾಲೀಕ ಸ್ವಾಮಿ ಹಾಗೂ ಆತನ ಸಹಾಯಕನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಲಾಗುತ್ತಿದೆ ಎಂದು ಎಸ್‌ಪಿ ಗಿರೀಶ್ ತಿಳಿಸಿದ್ದಾರೆ. ಎಪಿಡೆಮಿಕ್ ಕಾಯ್ದೆಯಡಿ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಜನವರಿ 2ರ ತನಕ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ:ಹೊಸ ವರ್ಷದಂದೇ ದುರಂತ: ವೈಷ್ಣೋದೇವಿ ಭವನದಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 12 ಮಂದಿ ಸಾವು, 20 ಮಂದಿಗೆ ಗಾಯ