ರಾಮನಗರ :ಕಾನೂನು ಎಷ್ಟೇ ಪ್ರಬಲವಾದರೂ ಜಾರಿಗೆ ತರುವ ಅಧಿಕಾರಿಗಳು ಮನಸ್ಸು ಮಾಡಿದ್ರೆ ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಕ್ರಮ ದಂಧೆ ನಡೆಸುತ್ತಾರೆ ಅನ್ನೋದಕ್ಕೆ ರಾಮನಗರದ ಅಕ್ರಮ ಮರಳು ದಂಧೆ ಪ್ರಕರಣ ಸಾಕ್ಷಿಯಾಗಿದೆ.
ಇತ್ತೀಚೆಗೆ ಮಾಗಡಿಯ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮರಳು ಲಾರಿಗಳನ್ನು ದಸ್ತಗಿರಿ ಮಾಡಲಾಗಿತ್ತು. ಬೀಟ್ನಲ್ಲಿದ್ದ ಪೊಲೀಸ್ ಅದರ ಸಂಪೂರ್ಣ ವಿಡಿಯೋ ಮತ್ತು ಫೋಟೋ ತೆಗೆದುಕೊಂಡು ತನ್ನ ಬೀಟ್ ಪುಸ್ತಕದಲ್ಲೂ ನಮೂದಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಡ್ರೈವರ್ ನನ್ನು ಬಿಟ್ಟು ಕಾನೂನು ಗಾಳಿಗೆ ತೂರಿದ್ದಾರೆ. ನಂತರ ಎಸ್ಪಿ ಅನೂಪ್ ಎ.ಶೆಟ್ಟಿ ಅಧಿಕಾರಿಗೆ ಈ ಕುರಿತು ಸೂಚನೆ ನೀಡಿದ ಕೂಡಲೇ ಲಾರಿ ಮಾಲೀಕ ಸೇರಿ ಮೂವರನ್ನ ಬಂಧಿಸಲಾಗಿದೆ.
ಮರಳು ದಂಧೆಯಲ್ಲಿ ಅಧಿಕಾರಿಗಳೇ ಶಾಮೀಲು ಮಾಗಡಿಯ ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ಹತ್ತು ಚಕ್ರಗಳನ್ನೊಳಗೊಂಡ ಎರಡು ಲಾರಿಯಲ್ಲಿ ಮರಳು ಸೀಜ್ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಬಳಿಕ, ಮರಳನ್ನ ಲೋಕೋಪಯೋಗಿ ಇಲಾಖೆ ವಶಕ್ಕೆ ನೀಡಿ ಮಾಹಿತಿ ಮತ್ತು ಪೋಟೋ ದಾಖಲೆಗಳನ್ನು ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ದುರಂತ ಅಂದರೆ, ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಕ್ಕೆ ಮರಳನ್ನು ಬಿಟ್ಟಿರುವುದಾಗಿ ಪೊಲೀಸ್ ಅಧಿಕಾರಿ ರೆಕಾರ್ಡ್ ಬಿಲ್ಡ್ ಮಾಡಿದ್ದಾರೆ. ಆದರೆ ಅಲ್ಲಾಗಿದ್ದೇ ಬೇರೆ, ಕೋರ್ಟ್ ಸೂಚಿಸಿದ್ದ ಪ್ರದೇಶಕ್ಕೆ ಕೇವಲ ಎರಡು ಟ್ಯಾಕ್ಟರ್ನಷ್ಟು ಮರಳು ಮಾತ್ರ ಬಂದು ಬಿದ್ದಿದ್ದು, ಇದನ್ನು ಕಂಡ ಒಬ್ಬರು ಇದರ ಚಿತ್ರೀಕರಣ ಮಾಡುತ್ತಿದ್ದಾರೆ ಮಾಧ್ಯಮಗಳಿಗೆ ನೀಡ್ತಾರೆ ಎಂದು ತಿಳಿಯುತ್ತಿದ್ದಂತೆ ಮತ್ತೆ ಎರಡು ಟ್ರ್ಯಾಕ್ಟರ್ ಮರಳು ಮರಳಿನ ಜೊತೆಗೆ ಬಿಡಲಾಗಿದೆ.
ಈ ಮಾಫಿಯಾ ಹಿಂದೆ ಮಾಗಡಿಯ ಕುದೂರು ಪೊಲೀಸ್ ಸಬ್ಇನ್ಸ್ಪೆಕ್ಟರ್ ಶಾಮೀಲಾಗಿದ್ದಾರೆಂಬ ಅನುಮಾನದ ಜೊತೆಗೆ ಅವರ ಕಾರ್ಯವೈಖರಿಗೆ ಇಲಾಖೆಯಲ್ಲಿಯೂ ವಿರೋಧ ಇದ್ದರೂ ಯಾರು ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಒಂದು ರೀತಿ ಕಾನೂನು ರಕ್ಷಕರೇ, ನ್ಯಾಯ ಒದಗಿಸುವ ನ್ಯಾಯಾಲಯವನ್ನೇ ದಾರಿತಪ್ಪಿಸುವ ಹಂತಕ್ಕೆ ಮುಂದಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.