ರಾಮನಗರ : ಇಡೀ ದೇಶದಲ್ಲಿ ಜನರು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ - ಬಿಜೆಪಿಗೆ ಈಗ ಒಲವಿದೆ. ಇನ್ನುಳಿದ ಎಲ್ಲಾ ಕಡೆ ಈ ಎರಡೂ ಪಕ್ಷಗಳನ್ನ ತಿರಸ್ಕಾರ ಮಾಡಿದ್ದಾರೆ. 2023ರಲ್ಲಿ ಜನರು ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಿಸುತ್ತಾರೆ. ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ಚನ್ನಪಟ್ಟಣದ ಬೈರಪಟ್ಟಣ ಗ್ರಾಮದ ಬಳಿ ಇರುವ ಬೆಂಗಳೂರು ಡೈರಿಯ ಶಿಬಿರದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಹೈಕಮಾಂಡ್ ನಮ್ಮ ರಾಜ್ಯವೇ ಆಗಬೇಕಂದ್ರೆ ಅದು ಪ್ರಾದೇಶಿಕ ಪಾರ್ಟಿಯಿಂದ ಮಾತ್ರ ಸಾಧ್ಯ. ಆಡಳಿತ ನಡೆಸೋದು ದೆಹಲಿಯ ಹೈಕಮಾಂಡ್‌ನಿಂದ ಅಲ್ಲ. ಕರ್ನಾಟಕದಿಂದಲೇ ಅಧಿಕಾರ ನಡೆಸಲಿ ಎಂಬ ನಿರ್ಧಾರ ಮಾಡ್ತಾರೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡ್ತೇವೆ ಎಂದರು.
ಇನ್ನು, ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ತೋರುವ ಧೋರಣೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು. ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಚರ್ಚೆ ಮಾಡುವವರು ಇಲ್ಲದಂತಾಗಿದೆ. ಬಿಜೆಪಿಯ 25 ಸಂಸದರಿದ್ದರೂ ಕನ್ನಡಕ್ಕೆ ಧಕ್ಕೆ ಆಗುತ್ತಿದೆ. ಸುದೀರ್ಘ ಚರ್ಚೆ ಆಗಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದೊಡ್ಡಿದೆ ಎಂದು ಕಿಡಿಕಾರಿದ್ದಾರೆ.
ಡಿ ಕೆ ಬ್ರದರ್ಸ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟಾಂಗ್ :ಹಾರೋಹಳ್ಳಿ ತಾಲೂಕು ಅಸ್ತಿತ್ವಕ್ಕೆ ಬಾರದ ಹಿನ್ನೆಲೆ ನಾನು ಸಿಎಂ ಆಗಿದ್ದಾಗ ಹಾರೋಹಳ್ಳಿಯನ್ನ ನೂತನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದ್ದೆ. ಆದರೆ, ಕನಕಪುರದಲ್ಲಿ ನಡೆಯುವ ರಾಜಕೀಯವೇ ಬೇರೆ ಇದೆ. ರಾಮನಗರ-ಚನ್ನಪಟ್ಟಣದಲ್ಲಿ ನಡೆಯುವ ರಾಜಕೀಯ ಬೇರೆ ಇದೆ. ಕನಕಪುರದಲ್ಲಿ ಅಧಿಕಾರಿಗಳ ಮೇಲೆ ದೌರ್ಜನ್ಯ ರಾಜಕೀಯ ನಡೆಯುತ್ತೆ. ಅದಕ್ಕಾಗಿಯೇ ಅದೆಲ್ಲವೂ ಮುಕ್ತವಾಗಬೇಕು ಎಂದು ಹಾರೋಹಳ್ಳಿಯನ್ನ ನೂತನ ತಾಲೂಕು ಮಾಡಿದ್ದೆ.