ಕರ್ನಾಟಕ

karnataka

ETV Bharat / state

Peacock attack: ನವಿಲು ನನ್ನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ ಎಂದು ಅರಣ್ಯ ಇಲಾಖೆಗೆ ಮಹಿಳೆ ದೂರು.. ಚನ್ನಪಟ್ಟಣದಲ್ಲಿ ಕೇಸ್​ - ಚನ್ನಪಟ್ಟಣದಲ್ಲಿ ವಿಚಿತ್ರ ಕೇಸ್​

ನವಿಲೊಂದರ ವಿರುದ್ಧ ಅರಳಾಳುಸಂದ್ರ ಗ್ರಾಮದ ಲಿಂಗಮ್ಮ ಎಂಬ ಮಹಿಳೆ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಜೂ 28 ರಂದು ಲಿಖಿತ ದೂರು ದಾಖಲಿಸಿದ್ದಾರೆ.

peacock
ನವಿಲು

By

Published : Jul 2, 2023, 10:46 PM IST

ರಾಮನಗರ: ರಾಷ್ಟ್ರೀಯ ಪಕ್ಷಿ ನವಿಲಿನ‌‌ ನರ್ತನಕ್ಕೆ ಮನಸೋಲದವರಿಲ್ಲ. ದೇಶದಲ್ಲಿ ನವಿಲುಗಳ ರಕ್ಷಣೆಗಾಗಿ ಅತಿ ಕಠಿಣ ಕಾನೂನು ಚಾಲ್ತಿ ಇರುವುದರಿಂದ ನವಿಲುಗಳ ಸಂಖ್ಯೆ ಇಂದು ದ್ವಿಗುಣಗೊಂಡಿದೆ. ಹಿಂದೆ ಹೆಚ್ಚಾಗಿ ಗುಡ್ಡಗಾಡಿನೊಳಗೆ ಇರುತ್ತಿದ್ದ ನವಿಲುಗಳು ನಾಡಿನತ್ತ ದೌಡಾಯಿಸುತ್ತಿವೆ. ರೈತರು ಬಿತ್ತಿದ ಬೆಳೆ, ಸಣ್ಣಪುಟ್ಟ ಕೀಟಗಳನ್ನು ತಿಂದು ಜೀವಿಸುತ್ತಿರುವ ನವಿಲುಗಳು ಆಗಾಗ್ಗೆ ತನ್ನ ಅಂದದ ಮೈಮಾಟದೊಂದಿಗೆ ನೃತ್ಯ ಮಾಡುವ ಮೂಲಕ ಜನರನ್ನು ರಂಜಿಸುತ್ತಿವೆ.

ಆದರೆ, 'ನನ್ನ ಮೇಲೆ ದಾಳಿ ಮಾಡಿ, ತನ್ನ ಚೂಪಾದ ಕೊಕ್ಕಿನಿಂದ ಗಾಯಗೊಳಿಸದೆ ಎಂದು ನವಿಲಿನ ವಿರುದ್ಧವೇ ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ದೂರು ನೀಡಿರುವ ಅಪರೂಪದ ಪ್ರಸಂಗವೊಂದು ಚನ್ನಪಟ್ಟಣ ತಾಲೂಕಿನಲ್ಲಿ ಚರ್ಚೆ ಆಗುತ್ತಿದೆ. ತಾಲೂಕಿನ ಅರಳಾಳುಸಂದ್ರ ಗ್ರಾಮದ ಲಿಂಗಮ್ಮ ಎಂಬ ಮಹಿಳೆ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಜೂ 28 ರಂದು ನವಿಲೊಂದರ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ. ನವಿಲಿನ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಈ ದೂರಿಗೆ ಕೆಲ ಗ್ರಾಮಸ್ಥರು ಕೂಡ ಸಹಿ ಹಾಕಿದ್ದಾರೆ.

ಈ ದೂರಿನಲ್ಲಿ ಏನಿದೆ ಗೊತ್ತಾ..?ಕಳೆದ ನಾಲ್ಕೈದು ದಿನಗಳಿಂದ ನವಿಲೊಂದು‌ ನಮ್ಮ ಮನೆ ಬಳಿ ವಾಸ ಮಾಡುತ್ತಿದ್ದು, ಜೂ.26 ರಂದು ನಮ್ಮ ಮನೆಯ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಆ ನವಿಲು ನನ್ನ ಮೇಲೆ ಏಕಾಏಕಿ ದಾಳಿ ಮಾಡಿದೆ. ಅಲ್ಲದೇ ತನ್ನ ಚೂಪಾದ ಕೊಕ್ಕಿನಿಂದ ಮಾರಣಾಂತಿಕ ಹಾಗೂ ಗಂಭೀರ ಗಾಯ ಮಾಡಿದೆ ಎಂದು ಲಿಂಗಮ್ಮ ಅರಣ್ಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಾದಾಗ ಸಂಜೆಯಾಗಿದ್ದ ಕಾರಣ, ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವೆ. ಮರುದಿನ ಬಿ. ವಿ. ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ನನ್ನ‌ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ನವಿಲಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನವಿಲನ್ನು ಹಿಡಿದು ಕಾಡಿಗೆ ಅಟ್ಟಬೇಕು ಎಂದು ಅರಣ್ಯ ಇಲಾಖೆಗೆ ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ದೂರನ್ನು ಸ್ವೀಕರಿಸಿದ್ದಾರೆ.

ಮಹಿಳೆ ಪರವಾಗಿ ನಿಂತ ಗ್ರಾಮಸ್ಥರು: ಮನೆಯ ಹಿಂದುಗಡೆ ಕೆಲಸ ಮಾಡುತ್ತಿದ್ದ ವೇಳೆ ನವಿಲು ಚೂಪಾದ ಕೊಕ್ಕಿನಿಂದ ಗಾಯಗೊಳಿಸದೆ ಎಂದು ಮಹಿಳೆ ಅರಣ್ಯ ಇಲಾಖೆಗೆ ದೂರು ನೀಡಿದ್ದ ವೇಳೆ ಗ್ರಾಮಸ್ಥರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮದಲ್ಲಿ ನವಿಲುಗಳ ಕಾಟ ಜಾಸ್ತಿ ಆಗಿದೆ. ಹೊಲದಲ್ಲಿ ರೈತರು ಬಿತ್ತಿದ್ದ ಬೀಜಗಳನ್ನು ತಿಂದು ನಾಶಗೊಳಿಸುತ್ತಿವೆ ಎಂದು ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಅರಳಾಳುಸಂದ್ರ ಭಾಗದಲ್ಲಿ ಇಷ್ಟು ದಿನ ಕಾಡಾನೆ ಹಾವಳಿ ಬಗ್ಗೆ ಹೆಚ್ಚು ದೂರುಗಳನ್ನು ಕೇಳುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಇದು ಹೊಸದಾಗಿ ನವಿಲಿನ ವಿರುದ್ಧ ದೂರು ನೀಡಿರುವುದು ವಿಶೇಷವಾಗಿದೆ.

ಇದನ್ನು ಓದಿ :ಕೈಕೊಟ್ಟ ಮುಂಗಾರು.. ಶೇ. 44ರಷ್ಟು ಮಳೆ ಕೊರತೆ : ಬೀಜ ಬಿತ್ತಿ ಆಕಾಶದತ್ತ ಮುಖ ಮಾಡಿದ ರೈತರು

ABOUT THE AUTHOR

...view details