ರಾಮನಗರ :ವಿಶ್ವದಲ್ಲೇ ಅತಿ ದೊಡ್ಡ ರೇಷ್ಮೇ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಲ್ಲೆ ರಾಮನಗರ. ಇಲ್ಲಿನ ರೇಷ್ಮೆ ಬೆಳೆಗಾರರ ಗೋಳು ಕೇಳೋರೆ ಇಲ್ಲದಂತಾಗಿದೆ. ರೇಷ್ಮೆ ಬೆಳೆಗಾರರು ತಿಂಗಳು ಪೂರ್ತಿ ಶ್ರಮ ಹಾಕಿ ಬೆಳೆ ಬೆಳೆದ್ರು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿರುವ ಕಾರಣ ಕಂಗೆಟ್ಟಿದ್ದಾರೆ. ಇದರ ಜೊತೆಗೆ ಇದೀಗ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ರೈತರಿಗೆ ನೆರವಾಗಿತ್ತೆನ್ನುವ ಮಹದಾಸೆಯಿತ್ತು, ಅದೂ ನುಂಗಲಾರದ ತುತ್ತಾಗಿದ್ದು ದಿನನಿತ್ಯ ರೇಷ್ಮೆ ಮಾರುಕಟ್ಟೆಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶ್ವ ಶ್ರೇಷ್ಠ ಮಾರುಕಟ್ಟೆಗೆ ಹೆಸರಾಗಿರುವ ಕಾರಣ, ಹೊರ ಜಿಲ್ಲೆಯ ರೈತರೂ ತಮ್ಮ ಬೆಳೆಯನ್ನ ತಂದು ಮಾರಾಟ ಮಾಡ್ತಿದ್ದಾರೆ. ತಿಂಗಳ ಪೂರ್ತಿ ಶ್ರಮ ಹಾಕಿ ಬೆಳೆದ ರೇಷ್ಮೆ ಬೆಳೆಯನ್ನು ತಂದು ಮಾರಾಟ ಮಾಡಿದ ರೈತರು ದಿನನಿತ್ಯ ಹಣಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಯೋಗಿಕವಾಗಿ ರಾಮನಗರದಲ್ಲಿ ಅಳವಡಿಸಿರುವ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಸಮರ್ಪಕ ನಿರ್ವಹಣೆ ಇಲ್ಲದೆ ಈ ಅವಸ್ಥೆ ಬಂದೊದಗಿದೆ.