ರಾಮನಗರ:ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ನಾಯಕರ ದೂರವಾಣಿ ಕದ್ದಾಲಿಕೆ ನಡೆದಿಲ್ಲ. ನಮ್ಮ ಮುಖ್ಯಮಂತ್ರಿಗಳಾಗಲಿ, ಗೃಹ ಸಚಿವರಾಗಲಿ ಫೋನ್ ಟ್ರ್ಯಾಪಿಂಗ್ ನಡೆಸಿಲ್ಲ. ಬೇಕಾದರೆ ಅವರು ಯಾವ ಮಟ್ಟದ ತನಿಖೆಯನ್ನಾದರೂ ನಡೆಸಲಿ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.
ಕನಕಪುರ ತಾಲೂಕಿನ ಸಂಗಮ ಬಳಿ ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾನು ಒಂದು ಭಾಗವಾಗಿದ್ದೆ. ಮುಖ್ಯಮಂತ್ರಿ ಆಗಲಿ, ಗೃಹ ಸಚಿವರಾಗಲಿ ಫೋನ್ ಕದ್ದಾಲಿಕೆ ಮಾಡಿಲ್ಲ. ಈಗ ಬಿಜೆಪಿ ಅವರದ್ದೇ ಸರ್ಕಾರ ಇದೆ. ಬೇಕಿದ್ದರೆ ತನಿಖೆ ಮಾಡಲಿ ಎಂದರು.
ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು 'ಅತೃಪ್ತರಿಗೆ ಬಿಜೆಪಿಯವರು ಈಗಾಗಲೇ ಘೋರಿ ಕಟ್ಟುತ್ತಿದ್ದಾರೆ. ನಾವೆಲ್ಲ ಅವರ ಕಾರ್ಯಕ್ಕೆ ಹೋಗಿ ಬರುತ್ತೇವೆ' ಎಂದು ವ್ಯಂಗ್ಯವಾಡಿದರು. ಹಳೇ ಮೈಸೂರು ಭಾಗದ ಪ್ರದೇಶಗಳು ಬರಪೀಡಿತವಾಗಿದ್ದು, ಇಲ್ಲಿನ ಕೆಲವು ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಬೇಕು. ನರೇಗಾ ಅಡಿ ಕನಿಷ್ಠ 150 ದಿನ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗ ಜಿಲ್ಲೆಗೆ ಪರಿಹಾರ ಘೋಷಿಸಿದಂತೆ ಉಳಿದ ನೆರೆಪೀಡಿತ ಜಿಲ್ಲೆಗಳಿಗೂ ತುರ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.