ರಾಮನಗರ :ಕೆಲವು ತಿಂಗಳಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರ ಮಾಡಿ ಜೆಡಿಎಸ್ನಲ್ಲಿ ಗೊಂದಲದ ವಾತಾವರಣ ಮೂಡಿಸುತ್ತಿದ್ದಾರೆ. ಹೀಗಾಗಿ, ನಾವು ವಿರೋಧಿಗಳಿಗೆ ಸಂದೇಶ ನೀಡಬೇಕಿದೆ. ನೀವು ಹೆಚ್ಚಿನ ಮತಗಳಿಂದ ನಮ್ಮ ತಂದೆಯನ್ನ ಗೆಲ್ಲಿಸಿಕೊಟ್ಟಿದ್ದೀರಿ. ನಿಮ್ಮ ಋಣ ನಮ್ಮ ಮೇಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರಕ್ಕೆ ಆಗಮಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಕಲಾ ತಂಡದೊಂದಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ನಂತರ ಇವರು ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರದಲ್ಲಿ ಹೊಂಗನೂರು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದರು.
ಮಾಜಿ ಸಿಎಂ ಹೆಚ್‌ಡಿಕೆ ಚನ್ನಪಟ್ಟಣದ ಅಭಿವೃದ್ಧಿ ಮಾಡಿದ್ದಾರೆ. ಚನ್ನಪಟ್ಟಣದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ತರುವ ಮೂಲಕ ಶ್ರಮಿಸಿದ್ದಾರೆ. ಕೆಲವರು ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅವರ ಬಗ್ಗೆ ಚರ್ಚೆ ಮಾಡಲು ಇಲ್ಲಿ ಹೋಗಲ್ಲ. ಲಕ್ಷಾಂತರ ಸಂಖ್ಯೆಯಲ್ಲಿರುವ ಕಾರ್ಯಕರ್ತರೇ ನಮ್ಮ ಬಲ. ಹೆಚ್‌ಡಿಕೆ ಮಾಡಿರುವ ಅಭಿವೃದ್ಧಿ ಜನರ ಹೃದಯದಲ್ಲಿದೆ. ನಮ್ಮ ಅಭಿವೃದ್ಧಿ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯಕ್ಕೆ ಒಳ್ಳೆಯದಲ್ಲ : ಸತ್ತೇಗಾಲ ನೀರಾವರಿ ಯೋಜನೆ ಮೂಲಕ ಶಾಶ್ವತವಾದ ನೀರಾವರಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಮೂಲಕ ದಿನದ 24 ಗಂಟೆ ನಿರಂತರ ನೀರು ಪೂರೈಕೆಯಾಗಲಿದೆ. ಕುಮಾರಣ್ಣನ ಈ ಕನಸು ಕೆಲವೇ ತಿಂಗಳಲ್ಲಿ ನನಸಾಗಲಿದ್ದು, ನೀವು ನಮಗೆ ಶಕ್ತಿ ನೀಡಿದ್ದೀರಿ. ನಿಮ್ಮ ಋಣ ತೀರಿಸುತ್ತೇವೆ. ತಾಲೂಕಿನ ಸಮಗ್ರ ಅಭಿವೃದ್ಧಿ ಮೂಲಕ ಋಣ ತೀರಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಬರಲಿದೆ ಎಂದು ವರದಿ ಇದೆ. ಆದರೆ, ಅತಂತ್ರ ಪರಿಸ್ಥಿತಿ ಬರುವುದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದರು.