ರಾಮನಗರ: ಚನ್ನಪಟ್ಟಣ ತಾಲೂಕಿನ ಭೈರಪಟ್ಟಣ ಗ್ರಾಮದಲ್ಲಿ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ನ 14 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಚನ್ನಪಟ್ಟಣ ಡಿವೈಎಸ್ಪಿ ಕಚೇರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿದ್ದರು.
ತಾಲೂಕಿನ ನೂರಾರು ಜೆಡಿಎಸ್ ಮುಖಂಡರು ಹಾಗೂ ನಿಖಿಲ್ ಕುಮಾರಸ್ವಾಮಿ ಡಿವೈಎಸ್ಪಿ ಕಚೇರಿಗೆ ಆಗಮಿಸಿದ್ದರು. ನಿನ್ನೆ ನಡೆದಿರುವ ಘಟನೆಗೆ ಹಾಗೂ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ದೂರು ಕುರಿತು ಡಿವೈಎಸ್ಪಿ ಓಂ ಪ್ರಕಾಶ್ ಅವರೊಂದಿಗೆ ಚರ್ಚೆ ನಡೆಸಿದರು.
ಡಿವೈಎಸ್ಪಿ ಓಂ ಪ್ರಕಾಶ್ ಬಳಿ ಚರ್ಚೆ ನಡೆಸಿದ ನಿಖಿಲ್ ಕುಮಾರಸ್ವಾಮಿ ನಿನ್ನೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಗುದ್ದಲಿ ಪೂಜೆ ನೆರವೇರಿಸಿದಂತೆ ಆದೇಶ ಪತ್ರ ಹೊರಡಿಸಿದ್ದರು. ಸಿ ಪಿ ಯೋಗೇಶ್ವರ್ ಗುದ್ದಲಿ ಪೂಜೆ ನೆರವೇರಿಸಿ ಗಲಭೆ ನಡೆಯಲು ಕಾರಣರಾಗಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಮೇಲೆ ಮಾತ್ರ ನೀವು ಎಫ್ಐಆರ್ ದಾಖಲಿಸಿದ್ದೀರಿ. ಘಟನೆ ನಡೆಯಲು ಕಾರಣಕರ್ತರಾದವರ ಮೇಲೆ ನೀವು ಎಫ್ಐಆರ್ ದಾಖಲು ಮಾಡಬೇಕು. ಇಲ್ಲವೆಂದರೆ ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಡಿವೈಎಸ್ಪಿ ಕಚೇರಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 143, 147,341,506, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿವೈ ಕಾರು ಚಾಲಕ ವೆಂಕಟೇಶ್ ಹಾಗೂ ಎಂಕೆ ದೊಡ್ಡಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹೇಮಂತ್ ದೂರು ಆಧರಿಸಿ ಎಫ್ ಐ ಆರ್ ದಾಖಲಾಗಿದೆ.
ಇದನ್ನೂ ಓದಿ:ಸಿ ಪಿ ಯೋಗೇಶ್ವರ್ ಮೇಲೆ ಮೊಟ್ಟೆ, ಕಲ್ಲು ಎಸೆದ ಜೆಡಿಎಸ್ ಕಾರ್ಯಕರ್ತರು.. ಪೊಲೀಸರಿಂದ ಲಾಠಿಚಾರ್ಜ್