ರಾಮನಗರ:ಕನಕಪುರ ತಾಲ್ಲೂಕಿನ ಮೇಳೆಕೋಟೆ ಗ್ರಾಮದಲ್ಲಿ ಪಕ್ಷಿಪ್ರೇಮಿ ಕನಕಪುರದ ಮರಸಪ್ಪ ರವಿ ಅವರು ತಮ್ಮ ಮನೆಯ ಮುಂದೆ ಗೂಡು ನಿರ್ಮಿಸಿ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳಂತಹ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.
ರಾಮನಗರ: ಪರಿಸರಪ್ರೇಮಿಯ ಪಕ್ಷಿಪ್ರೇಮಕ್ಕೆ ಮನಸೋಲದವರಿಲ್ಲ! - ಪಕ್ಷಿ ಪ್ರೇಮಿ ಕನಕಪುರದ ಮರಸಪ್ಪ ರವಿ
ಈ ಪರಿಸರ ಪ್ರೇಮಿಗೆ ಪ್ರಾಣಿ, ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ರಾಮನಗರ ಜಿಲ್ಲೆಯ ಇವರು ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಪಕ್ಷಿಗಳಿಗಾಗಿಯೇ ತಮ್ಮ ಮನೆ ಎದುರು ಗೂಡು ನಿರ್ಮಿಸಿ ಆಶ್ರಯ ಕಲ್ಪಿಸುತ್ತಿದ್ದಾರೆ.
ತಮ್ಮ ಪುಟ್ಟ ಮನೆಯ ಮುಂಭಾಗ ಬೊಂಬಿನಲ್ಲಿ ರಂಧ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿಕೊಡುತ್ತಿದ್ದಾರೆ. ನಿತ್ಯ ಪಕ್ಷಿಗಳಿಗೆ ಧಾನ್ಯಗಳನ್ನು ನೀಡಿ ಪೋಷಿಸುತ್ತಿದ್ದಾರೆ. ಮನೆಯ ಸುತ್ತಲಿನಲ್ಲಿ ಲಭ್ಯವಿರುವ ಅಲ್ಪಸ್ವಲ್ಪ ಸ್ಥಳದಲ್ಲಿ ನಂದನವನವನ್ನಾಗಿಸಿಕೊಂಡು ಪಕ್ಷಿಗಳಿಗೆ ಅನುಕೂಲವಾಗಲೆಂದೇ ಮಾವು, ಸೀಬೆ, ದಾಳಿಂಬೆ, ಅಂಜೂರ, ಸಪೋಟಾ, ಬೆಣ್ಣೆ ಹಣ್ಣು ಸೇರಿದಂತೆ ಮೊದಲಾದ ಗಿಡಗಳನ್ನು ಬೆಳೆಸಿದ್ದಾರೆ. ಇವರ ಕಿರು ಉದ್ಯಾನದಲ್ಲಿ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಕಾಜಾಣ, ಕೋಗಿಲೆ, ಗಿಣಿ, ಅಪರೂಪದ ಸನ್ಬರ್ಡ್, ದರ್ಜೆಯ ಹಕ್ಕಿಗಳು ಬರುತ್ತವೆ.
ಪ್ರಾಣಿ, ಪಕ್ಷಿಗಳು ಪಟಾಕಿ ಸದ್ದಿಗೆ ಬಹಳಷ್ಟು ಹೆದರುತ್ತವೆ. ಕೆಲ ಸಣ್ಣಸಣ್ಣ ಪಕ್ಷಿಗಳು ಪಟಾಕಿ ಸದ್ದಿಗೆ ಪ್ರಾಣವನ್ನೆ ಕಳೆದುಕೊಳ್ಳುತ್ತವೆ. ಇದರಿಂದ ಪಕ್ಷಿ ಸಂಕುಲವೇ ಮುಂದಿನ ದಿನಗಳಲ್ಲಿ ಅಳಿವಿನಂಚಿಗೆ ಬಂದು ತಲುಪಲಿದೆ. ದೀಪಾವಳಿ ಹಬ್ಬದ ದಿನದಂದು ಪಟಾಕಿ ಹಚ್ಚಿ ಪರಿಸರ ಹಾಳು ಮಾಡುವ ಬದಲು ಮಣ್ಣಿನ ದೀಪ ಹಚ್ಚುವ ಮೂಲಕ ಪರಿಸರ ಸಂರಕ್ಷಣೆ ಜೊತೆಗೆ ಪ್ರಾಣಿ ಸಂಕುಲದ ಉಳಿವಿಗೂ ಹೆಚ್ಚು ಸಹಕಾರಿಯಾಗಲಿದೆ ಎಂದು ಕನಕಪುರದ ಮರಸಪ್ಪ ರವಿ ಹೇಳುತ್ತಾರೆ.