ರಾಮನಗರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಮುತ್ತಪ್ಪ ರೈ ಅವರ ಆರೋಗ್ಯ ವಿಚಾರದಲ್ಲಿ ಸಾಕಷ್ಟು ಸುದ್ದಿ ಹಬ್ಬಿದ್ದವು. ಮುತ್ತಪ್ಪ ರೈ ಅವರು ಕಳೆದ ಎಂಟು ತಿಂಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ, ಅವರ ಆರೋಗ್ಯ ಏರುಪೇರಾಗಿದೆ. ಅವರು ಇನ್ನು ಉಳಿಯುವುದು ತುಂಬಾ ಕಷ್ಟ ಅಂತಾ ಸುದ್ದಿ ಹಬ್ಬಿತ್ತು. ಇವೆಲ್ಲಾ ಅರೆಬರೆ ಸತ್ಯಗಳಿಗೆ ಊಹಾ ಪೋಹಗಳಿಗೆ ಮುತ್ತಪ್ಪ ರೈ ತಮ್ಮ ಬಿಡದಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರ ಆರೋಗ್ಯದ ಬಗ್ಗೆ ಅವರೇ ಸ್ಪಷ್ಟನೆ ನೀಡಿದರು.
ಆರೋಗ್ಯ ವಿಚಾರದಲ್ಲಿ ಹಬ್ಬಿದ ವದಂತಿಗಳಿಗೆ ಖುದ್ದು ಮುತ್ತಪ್ಪ ರೈ ತೆರೆ.. ಬಿಡದಿ ಬಳಿ ಇರುವ ಮುತ್ತಪ್ಪ ರೈ ಅವರ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜನರ ಸೇವೆಯಿಂದಾಗಿ ನನ್ನ ಆರೋಗ್ಯ ಚೆನ್ನಾಗಿದೆ. ಕೆಲವು ತಿಂಗಳಿಂದ ನಾನು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದೇನೆ. ಅದಕ್ಕಾಗಿ ದೇಶದ ಮೂಲೆ ಮೂಲೆಗಳನ್ನೂ ತಿರುಗಿ ಈಗಾಗಲೇ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರೇ ನನಗೂ ಚಿಕಿತ್ಸೆ ನೀಡಿದ್ದಾರೆ.
ನಾನು ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ. ನಾನು ಆಸ್ಪತ್ರೆಯಲ್ಲಿದ್ದಷ್ಟು ದಿನ ನನ್ನನ್ನು ಯಾರೂ ನೋಡಲು ಸಾಧ್ಯವಾಗಿರಲಿಲ್ಲ. ಇಷ್ಟು ದಿನಗಳ ಕಾಲ ನನ್ನನ್ನ ನಂಬಿಕೊಂಡಿರುವ, ಜನರನ್ನ ನೋಡದೆ ಇರಲು ನನಗೆ ಸಾಧ್ಯವಾಗಲೇ ಇಲ್ಲ. ಅದಕ್ಕಾಗಿ ನನ್ನ ಜನರ ಜತೆಗೆ ಇದ್ದುಕೊಂಡು ನನ್ನ ಕಾಯಿಲೆಯನ್ನ ಮರೆಯುತ್ತಿದ್ದೇನೆ. ಅದೇ ರೀತಿ ನಾನು ಮಾಡಿರುವ ಒಳ್ಳೆಯ ಕೆಲಸಗಳು ಹಾಗೂ ಧಾರ್ಮಿಕ ಕೆಲಸದಿಂದಾಗಿ ನಾನು ಇನ್ನೂ ಬದುಕಿದ್ದೇನೆ. ಅಂದಹಾಗೆ ನಾನು ಬದುಕಿರುವವರೆಗೂ ಜನರ ಜೊತೆಯಲ್ಲೇ ಇರುತ್ತೇನೆ. ಹಾಗೇ ನಾನು ಸಾವಿಗೆ ಅಂಜುವ ವ್ಯಕ್ತಿ ಅಲ್ಲವೇ ಅಲ್ಲ ಎಂದರು.
ಇದೇ ವೇಳೆ ಇನ್ನೊಂದು ಖಾಸಗಿ ಮಾಹಿತಿಯನ್ನೂ ಅವರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು. ಮುಂದೆ ಏನಾಗುತ್ತೋ ಗೊತ್ತಿಲ್ಲ. ಅದಕ್ಕಾಗಿ ನಾನು ಇಂದೇ ವಿಲ್ ಬರೆದಿಟ್ಟಿದ್ದೇನೆ. ಕಳೆದ ಹದಿನೈದು ವರ್ಷಗಳಿಂದ ನನ್ನೊಂದಿಗಿದ್ದು ಸೇವೆ ಮಾಡಿದವರನ್ನು ಗುರುತಿಸಿ ಪ್ರತಿಯೊಬ್ಬರಿಗೂ ಸೈಟ್ಗಳನ್ನು ನೀಡಿದ್ದೇನೆ. ಅದು ವಿಲ್ನಲ್ಲಿದೆ. ನನ್ನೆಲ್ಲಾ ಆಸ್ತಿಗೆ ಕಾನೂನಡಿಯಲ್ಲಿ ತೆರಿಗೆ ಕಟ್ಟಿದ್ದೇನೆ. ನನ್ನ ಇಬ್ಬರು ಮಕ್ಕಳ ಹಕ್ಕು ಸೇರಿ ಎಲ್ಲವನ್ನೂ ಆ ವಿಲ್‌ನಲ್ಲಿ ಬರೆದಿಟ್ಟಿರುವುದಾಗಿ ಬಹಿರಂಗಪಡಿಸಿದರು.