ರಾಮನಗರ :ಮಗಳನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ನಡು ರಸ್ತೆಯಲ್ಲಿ ಥಳಿಸಿ ಕೊಲೆ ಮಾಡಿರುವ ಆರೋಪದ ಮೇಲೆ ಯುವತಿಯ ತಂದೆ ಸೇರಿ ನಾಲ್ವರನ್ನು ಮಾಗಡಿ ಪೋಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಯುವತಿಯ ತಂದೆ ನಾಗೇಶ್, ಅಣ್ಣಲೋಕೇಶ್ ಹಾಗೂ ಉದಯ್, ರವಿಕುಮಾರ್ ಎನ್ನುವವರನ್ನ ಬಂಧಿಸಿದ್ದಾರೆ. ಅಲ್ಲದೆ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನೆಯ ಹಿನ್ನೆಲೆ
ಆನೆಹಳ್ಳ ಬಳಿಯ ಮಾನಗಲ್ ಗ್ರಾಮದ ರವಿ ಎಂಬಾತನನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.ಇದಕ್ಕೂ ಮೊದಲು ಮಾಗಡಿ ಪುರಸಭೆ ಮುಂಭಾಗ ಹಾಕಿ ಸ್ಟಿಕ್, ಬ್ಯಾಟ್ನಿಂದ ಹಲ್ಲೆ ನಡೆಸಿರುವ ಆರೋಪಿಗಳು ಹಲ್ಲೆ ಬಳಿಕ ಅಪಹರಣ ನಡೆಸಿ ಕೊಲೆ ಮಾಡಿದ್ದರು ಎನ್ನಲಾಗಿದೆ. ತನ್ನ ಮಾವನ ಮಗಳನ್ನ ಪ್ರೀತಿಸಿದ್ದ ರವಿಗೆ ಹುಡುಗಿಯ ತಂದೆ ಮತ್ತು ಸಂಬಂಧಿಕರು ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದರು. ಇದನ್ನು ಲೆಕ್ಕಿಸದೆ ಹುಡುಗಿಯ ಜೊತೆ ಲವ್ವಿ ಡವ್ವಿ ಮುಂದುವರಿಸಿದ್ದಕ್ಕೆ ರವಿಯನ್ನ ಮಾತುಕತೆಗೆಂದು ಕರೆಸಿಕೊಂಡು ಮನ ಬಂದಂತೆ ಥಳಿಸಿ ಕೊಲೆ ಮಾಡಿದ್ದರು. ಈ ಸಂಬಂಧ ಹುಡುಗಿ ಪೋಷಕರೇ ಕೃತ್ಯ ಎಸಗಿದ್ದಾರೆಂದು ದೂರು ದಾಖಲಾಗಿತ್ತು.