ರಾಮನಗರ: ರಾಜ್ಯ ಸರ್ಕಾರ ಪತನವಾಗಿ ಹೊಸ ಸರ್ಕಾರ ಬರಲಿದ್ದು, ಅದಕ್ಕಾಗಿ ಈಗಾಗಲೇ ಪೂರ್ವ ತಯಾರಿ ನಡೆದಿದೆ. ಸರ್ಕಾರ ಕೆಡವಲು ನಾವ್ಯಾರೂ ಪ್ರಯತ್ನಿಸಬೇಕಿಲ್ಲ ಅವರೇ ಮಾಡ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಭವಿಷ್ಯ ನುಡಿದಿದ್ದಾರೆ.
ಮಾಗಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಸರ್ಕಾರವನ್ನು ಬಿಜೆಪಿಯವರೇ ಕೆಡವಿ ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ಚುನಾವಣೆ ಬರಲಿದೆ ಎಂದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕಾಗಿ ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೆ, ಅವೆಲ್ಲವನ್ನೂ ಮರೆತು ಮಾಗಡಿಯಲ್ಲಿ ಬಾಲಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಕಟ್ಟುತ್ತೇವೆ. ನೀವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಪಕ್ಷ ಬಲವರ್ಧನೆ ಮಾಡಿ. ನಾವ್ಯಾರೂ ವಿರೋಧಿಗಳ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ನೀವು ಕೂಡ ತಲೆಕೆಡಿಸಿಕೊಳ್ಳದೇ ಪಕ್ಷ ಸಧೃಡವಾಗಿ ಬೆಳೆಸಬೇಕು ಎಂದರು.
ಬಾಲಕೃಷ್ಣ ನೇತೃತ್ವದಲ್ಲಿ ಮಾಗಡಿಯಲ್ಲಿ ಪಕ್ಷ ಕಟ್ಟುತ್ತೇವೆ. ಬಾಲಕೃಷ್ಣ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಘೋಷಿಸಿದರು. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಅಳಿಸಿ ಹಾಕಲು ನರೇಂದ್ರ ಮೋದಿಯಿಂದಲೂ ಸಾಧ್ಯವಿಲ್ಲ ಎಂದರು.
ಕೊರೊನಾ ಪ್ಯಾಕೇಜ್ 20 ಲಕ್ಷ ಕೋಟಿ ಹೆಸರಲ್ಲಿ ಜನರಿಗೆ ನಾಮ ಹಾಕುತ್ತಿದ್ದಾರೆ. ಬಡವರಿಗೆ ಒಂದು ನಯಾ ಪೈಸೆ ಕೂಡ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕರ್ತರ ಸಭೆಯಲ್ಲಿ ಡಿ.ಕೆ .ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮವನ್ನು ಬೂತ್ ಮಟ್ಟದಲ್ಲಿ ಎಲ್ಇಡಿ ವಾಲ್ ಮೂಲಕ ವೀಕ್ಷಿಸುವುದು ಹಾಗೂ ಮುಂಜಾಗೃತಾ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.