ರಾಮನಗರ:ಚನ್ನಪಟ್ಟಣದಲ್ಲಿ ರಾಜಕೀಯವಾಗಿ ಅಸ್ತಿತ್ವಗಳಿಸಲು ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲು ಮುಂದಾಗಿದ್ದ ಬಿಜೆಪಿ ಎಂಎಲ್‌ಸಿ ಸಿ.ಪಿ ಯೋಗೇಶ್ವರ್‌ಗೆ ನಮ್ಮ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ರಾಮನಗರ ತಾಲೂಕಿನ ಹರಿಸಂದ್ರ ಗ್ರಾಮದಲ್ಲಿನ ನೂತನ ರಿವೈಸ್ ರಿಟ್ರೀಟ್ ರೆಸಾರ್ಟ್‌ಗೆ ಅವರು ಭೇಟಿ ನೀಡಿದ್ದರು. ಕೆಆರ್‌ಡಿಎಲ್ ನಿಗಮದ ಅಧ್ಯಕ್ಷ, ಬಿಜೆಪಿ ಮುಖಂಡ ಎಂ.ರುದ್ರೇಶ್ ಮಾಲೀಕತ್ವದ ರೆಸಾರ್ಟ್ ಅನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದ ಬೆನ್ನಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರೆಸಾರ್ಟ್‌ಗೆ ಆಗಮಿಸಿ ಶುಭ ಕೋರಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಂಎಲ್‌ಸಿ ಸಿ.ಪಿ ಯೋಗೇಶ್ವರ್‌ಗೆ ಟಕ್ಕರ್ ನೀಡಿದ್ದಲ್ಲದೇ, ಒಬ್ಬ ಎಂಎಲ್‌ಸಿಗೆ ಹೆಚ್ಚಿನ ಅನುದಾನ ನೀಡಿದ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡರು. ಕಳೆದ 20 ವರ್ಷಗಳಿಂದ ಸಿಪಿವೈ ಮಾಡದ ಅಭಿವೃದ್ಧಿ ಮಾಜಿ ಸಿಎಂ ಹೆಚ್‌ಡಿಕೆ ಅವರ ಕಾಲದಲ್ಲಿ ಆಗಿದೆ. ಹೇಗಾದರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಕ್ಷೇತ್ರದಲ್ಲಿ ಉಳಿಸಿಕೊಳ್ಳಬೇಕೆಂದು ಯೋಗೇಶ್ವರ್ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.