ರಾಮನಗರ :ಎಂಇಎಸ್ ಸಂಘಟನೆ ಬ್ಯಾನ್ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ. ಅವರು ನಮ್ಮವರೇ, ನಮ್ಮಲಿಯೇ ಇದ್ದಾರೆ. ಅವರ ಹಕ್ಕನ್ನು ಅವರು ಕೇಳಲಿ. ಆದರೆ, ಪುಂಡಾಟ ಮಾಡುವುದು ಸರಿಯಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಅವರು ಎಂಇಎಸ್ ಕಿಡಿಗೇಡಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿ ಗಲಭೆ ಕುರಿತು ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿರುವುದು.. ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದ ಘಟನೆ ಖಂಡನೀಯ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಎಂಇಎಸ್ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ನೀಡಲಿದೆ. ಅಧಿವೇಶನ ಮುಗಿದ ಬಳಿಕ ಎಲ್ಲಾ ಬಿಗಿ ಕ್ರಮ ವಹಿಸಲಾಗುತ್ತದೆ ಎಂದರು.
ಈಗಾಗಲೇ ಘಟನೆಗೆ ಸಂಬಂಧ ಸಿಸಿಟಿವಿ ದೃಶ್ಯ ಸಂಗ್ರಹಿಸಲಾಗಿದೆ. ಅವುಗಳ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಹಿಂದೆ ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ನವರು ಇದ್ದರು. ಆದರೆ, ಈಗ ಬಿಜೆಪಿ ಪಕ್ಷದವರಿದ್ದಾರೆ. ಊರು ಎಂದ ಮೇಲೆ ಇಂತಹ ಕೆಲವರು ಇದ್ದೇ ಇರುತ್ತಾರೆ ಎಂದರು.
ಬೆಳಗಾವಿ ಅವರ ಕೈತಪ್ಪುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಮಾಡುತ್ತಿದ್ದಾರೆ. ಈ ಹಿಂದೆ ಇದ್ದ ರೀತಿ ಎಂಇಎಸ್ ಇಲ್ಲ. ಈಗ ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಬೆಳಗಾವಿ ಗಲಭೆಯ ಕಿಡಿಗೇಡಿಗಳಿಗೆ ಬುದ್ಧಿ ಕಲಿಸಿ : ಪೊಲೀಸರಿಗೆ ಗೃಹ ಸಚಿವರ ಸೂಚನೆ