ರಾಮನಗರ:ರಾಜಕೀಯ ವಿರೋಧಿಗಳೇ ಕೊರೊನಾ ಸೋಂಕು ಹರಡುವಿಕೆಗೆ ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಆರೋಪ ಮಾಡಿದರು.
ಓದಿ: ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿಯೇ ಅಧಿಕ ಸಕ್ರಿಯ ಪ್ರಕರಣ.. ಐಸಿಎಂಆರ್ ಹೇಳಿದ್ದೇನು?
ಕೊರೊನಾ ಸೋಂಕಿನ ವಾತಾವರಣವನ್ನ ರಾಜಕೀಯ ಲಾಭ ಪಡೆಯಲು ವಿರೋಧ ಪಕ್ಷದ ಮುಖಂಡರುಗಳು ಹಲವು ಹೇಳಿಕೆಗಳನ್ನ ಕೊಟ್ಟರು. ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿ ಯಾರೂ ಹಾಕಿಸಿಕೊಳ್ಳದಂತೆ ಮಾಡಿದರು. ಇದರಿಂದ ದುಷ್ಪರಿಣಾಮ ಆಗುತ್ತದೆ ತಗೋಬೇಡಿ ಎಂದು ಅಪಪ್ರಚಾರ ಮಾಡಿದರು.
ಜನರು ಭಯದಿಂದ ಆಸ್ಪತ್ರೆ ಕಡೆ ಮುಖ ಮಾಡಲೇ ಇಲ್ಲ. ಈಗ ಜನರಿಗೆ ಅರಿವಾಗಿದೆ ವಾಕ್ಸಿನ್ನಿಂದ ಸೋಂಕು ತಡೆಯಲು ಸಾಧ್ಯ ಎಂದು ಗೊತ್ತಾಗಿದೆ. ಈಗ ಜನ ವಾಕ್ಸಿನ್ ಗಾಗಿ ಮುಗಿ ಬಿದ್ದಿದ್ದಾರೆ. ಸರ್ಕಾರಕ್ಕೆ ವೈದ್ಯಕೀಯ ಸೌಲಭ್ಯ ಕೊಡುವ ಸವಾಲು ಕಾಡುತ್ತಿದೆ. ಈ ಸಂದರ್ಭ ಉಪಯೋಗಿಸಿಕೊಂಡು ಯಾರನ್ನೂ ಸಹ ಬಿಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಭಷ್ಟ ಎಂದು ಬಿಂಬಿಸುತ್ತಿದ್ದಾರೆ.
ಜನರ ಜತೆ ನಿಲ್ಲಬೇಕಾದ ರಾಜಕಾರಣಿಗಳು ಈ ಸಮಯದಲ್ಲಿ ಕರುಣೆಯಿಂದ ವರ್ತಿಸಬೇಕು. ರಾಜಕೀಯವಾಗಿ ಬಳಸಿಕೊಂಡ ವಿರೋಧಿಗಳನ್ನ ನಾನು ಖಂಡಿಸುತ್ತೇನೆ ಎಂದು ಇದೇ ವೇಳೆ ಸಿಪಿವೈ ತಿರುಗೇಟು ನೀಡಿದರು.
ಕೊರೊನಾ ಪಾಸಿಟಿವ್ ಪ್ರಕರಣ ಎಲ್ಲೆ ಮೀರಿದೆ:
ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಈಗಾಗಲೆ ಲಾಕ್ಡೌನ್ ಜಾರಿಯಾಗಿದ್ದು, ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಒಂದು ಹೊತ್ತು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದ ಜನರಿಗೆ ಉಚಿತವಾಗಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಈ ವೇಳೆ ಮಾತನಾಡಿದ ಅವರು, ಕೊರೊನಾ ಅನಿರೀಕ್ಷಿತವಾಗಿ ದೇಶದಾದ್ಯಂತ ಒಕ್ಕರಿಸಿದೆ. ಏಕಾಏಕಿ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಜನತೆ ಹಸಿದು ಇರಬಾರದೆಂಬ ಉದ್ದೇಶದಿಂದ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಇದೇ ವೇಳೆ ಸಿಪಿವೈ ತಿಳಿಸಿದರು.
ಕಾಂಟ್ರವರ್ಸಿಗಳಿಗೆ ಉತ್ತರ ಕೊಡಲ್ಲ:
ನಾನು ಕಾಂಟ್ರವರ್ಸಿಗಳಿಗೆ ಉತ್ತರ ಕೊಡಲ್ಲ. ಆದರೆ ನಿಜ, ಇದೆಲ್ಲವೂ ಒಂದು ಹೊಸ ಸವಾಲು. ಇದು ಸಾಮೂಹಿಕವಾಗಿ, ಸಾಂಕ್ರಾಮಿಕವಾಗಿ ಹಬ್ಬುವ ರೋಗವಾಗಿದೆ. ಹಿಂದೆ ಪ್ಲೇಗ್, ಕಾಲರಾ ಬರ್ತಿತ್ತು, ಅದೇ ರೀತಿ ಕೊರೊನಾ ಕೂಡ ಬಂದಿದೆ ಎಂದು ಬೆಡ್ ಬ್ಲಾಗಿಂಗ್ ವಿಚಾರವಾಗಿ ಸಚಿವ ಸಿ.ಪಿ.ಯೋಗೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಏಕಾಏಕಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಾಕ್ಟಿಕಲ್ ಆಗಿ ಕೆಲಸ ಮಾಡುವಾಗ ಸಣ್ಣಪುಟ್ಟ ಲೋಪ ಇರಬಹುದು. ಅದೆಲ್ಲವೂ ದೊಡ್ಡ ಸುದ್ದಿ ಅಲ್ಲ, ನಾನು ಉತ್ತರ ಕೊಡಲ್ಲ ಎಂದು ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.