ರಾಮನಗರ: ಆರ್ಎಸ್ಎಸ್ ಆಳ-ಅಗಲದ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಉನ್ನತ ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಮೊದಲು ಅವರ ಆಳ-ಅಗಲ, ಉದ್ದ ನೋಡಿಕೊಳ್ಳಬೇಕು. ಈ ಪಿಎಸ್ಐ ಸ್ಕ್ಯಾಂ ಪಿತಾಮಹ ಅಂದ್ರೆ ಅದು ಸಿದ್ದರಾಮಯ್ಯ. ಅವರು ಸಿಎಂ ಆಗಿದ್ದಾಗ, ಅವರ ಕಾಲದಲ್ಲಿ ನಡೆದಿರುವಂತಹ ಅಕ್ರಮಗಳ ಬಗ್ಗೆ ಮಾತಾಡುವುದನ್ನ ಶುರು ಮಾಡಲಿ ಎಂದು ಕಿಡಿಕಾರಿದರು.
ಈ ಹಿಂದೆ ಪಿಎಸ್ಐ ಹಗರಣ ಇದೇ ಶಾಂತಕುಮಾರ್ ಅವಧಿಯಲ್ಲಿ ಆಗಿರುವುದು. ತನಿಖೆ ಶುರು ಮಾಡಿ ಅದು ಅಲ್ಲಿಗೆ ನಿಂತುಹೋಯ್ತು ಯಾಕೆ?. ಯಾಕೆ ಸಿದ್ದರಾಮಯ್ಯನವರೇ ನಿಮ್ಮ ಕಾಲದಲ್ಲಿ ಆಗಿರುವ PSI ಅಕ್ರಮಗಳ ಮೂಲ ಹುಡುಕಲು ಹೋಗಲಿಲ್ಲ. ಈ ವಿಚಾರದಲ್ಲಿ ಮಾತನಾಡುವಾಗ ಸಿದ್ದರಾಮಯ್ಯನವರು ಮುಕ್ತವಾಗಿ ಮಾತನಾಡಬೇಕಿದೆ ಎಂದರು.
ಸಿದ್ದರಾಮಯ್ಯ ವಿರುದ್ಧ ಸಚಿವ ಅಶ್ವತ್ಥನಾರಾಯಣ್ ವಾಗ್ದಾಳಿ ಸಿದ್ದರಾಮಯ್ಯ ಉತ್ತರ ಕೊಡಬೇಕು:ಏನೇನ್ ಮಾಡಿದ್ದೀರಾ? ಯಾವ್ಯಾವ ಜಾತಿಗೆ ಏನು ಕೊಟ್ಟಿದ್ದೀರಾ? ಯಾವ ರೀತಿ ಅವ್ಯವಹಾರ ಮಾಡಿದ್ದೀರಾ? ಸಿದ್ದರಾಮಯ್ಯ ಇದಕ್ಕೆಲ್ಲಾ ಸೂಕ್ತ ಉತ್ತರ ಕೊಡಬೇಕು. ರಾಜಕೀಯ ಸನ್ಯಾಸತ್ವ ತಗೊಳ್ತೀನಿ ಅಂದ್ರು. ಅವರ ಅವಧಿಯಲ್ಲಿ ಐದು ವರ್ಷ ಸಾಕಪ್ಪ ನನಗೆ. ಮುಖ್ಯಮಂತ್ರಿಯಾಗಿ ನಿವೃತ್ತಿ ಪಡೆಯುತ್ತೀನಿ ಎಂದು ಹೇಳಿದ್ರು. ಈಗ ಮತ್ತೊಂದು ಅವಧಿಗೆ ಸಿಎಂ ಆಗಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು: ನಮ್ಮ ಕಾಲದಲ್ಲಿ ಹಗರಣ ಆಗಿದ್ರೆ, ಕಡಲೇಪುರಿ ತಿಂತಿದ್ರಾ ಅವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅಶ್ವತ್ಥನಾರಾಯಣ್ ಕಿಡಿಕಾರಿದರು. ಕಡ್ಲೇಪುರಿ ಯಾರೂ ತಿಂದಿಲ್ಲ. ಇಡೀ ಲೋಕಕ್ಕೇ ಗೊತ್ತಿದೆ. ಅಕ್ರಮ ಮುಚ್ಚುಹಾಕಿದ್ರು ಸ್ವಾಮಿ. ಹಗರಣ ಬಯಲಿಗೆ ಬಂದಿದೆ ಅಲ್ವಾ? ನನಗೇನು ಕನಸಲ್ಲಿ ಬರುತ್ತಾ? ನಡೆದಿರುವ ಸತ್ಯವನ್ನ ಹೇಳ್ತಿದ್ದೀನಿ, ಲೋಕಕ್ಕೆ ಗೊತ್ತಿರುವ ಸತ್ಯ ಇದು. ಬಂಡತನದಿಂದ ಆಡಳಿತ ಹಾಗೂ ಸರ್ಕಾರ ನಡೆಸಿ ಮುಂದೆ ಸಾಗಿರುವಂತಹ ವ್ಯಕ್ತಿ ಅಂದ್ರೆ ಅದು ಸಿದ್ದರಾಮಯ್ಯನವರು ಎಂದು ಸಚಿವರು ವಾಗ್ದಾಳಿ ನಡೆಸಿದರು.
ಸಿಎಂಗೆ ಪತ್ರ: ಇದೀಗ ಸಿದ್ದರಾಮೋತ್ಸವ ಮಾಡಿಕೊಳ್ಳುವ ಮೂಲಕ ಆಡಂಬರ ಮಾಡಲು ಹೊರಟಿದ್ದಾರೆ. ನಾನು ಇವತ್ತು ಹೇಳ್ತಿದ್ದೀನಿ.. ಹಿಂದಿನ ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲೂ ಆದ PSI ಹಗರಣದ ಬಗ್ಗೆ ತನಿಖೆಯಾಗಲಿ. ಎಲ್ಲೆಲ್ಲಿ ಮುಚ್ಚುಮರೆ ಮಾಡಿದ್ದಾರಲ್ಲ ಎಲ್ಲವೂ ತನಿಖೆ ಆಗಲಿ. ಸಿದ್ದರಾಮಯ್ಯ ಎಂದೂ ಕೂಡ ಬಡವರ ಪರ ಇಲ್ಲದವರು, ಅವರು ಏನಿದ್ರು ಶ್ರೀಮಂತರ ಪರ ಇರುವವರು. ಸಿದ್ದರಾಮಯ್ಯ ಅವಧಿಯ ಅಕ್ರಮಗಳನ್ನು ತನಿಖೆ ಮಾಡುವಂತೆ ಇವತ್ತೇ ಸಿಎಂಗೆ ಪತ್ರ ಬರೆಯುತ್ತೇನೆ ಎಂದು ಸಚಿವ ಅಶ್ವತ್ಥನಾರಾಯಣ್ ಗುಡುಗಿದರು.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಸಿದ್ದು-ಡಿಕೆಶಿ ನಡುವೆ ನಿಲ್ಲದ ಶೀತಲ ಸಮರ.. ಇಬ್ಬರಿಂದಲೂ ಪ್ಲಾನ್, ಮಾಸ್ಟರ್ ಪ್ಲಾನ್
ಬಿಎಸ್ವೈ ಬೆಂಬಲಿಗರಿಗೆ ಕೋಕ್: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ನಾಯಕರು. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅವಕಾಶ ಸಿಗುತ್ತದೆ. ಅವರು ವ್ಯಕ್ತಿಗತವಾಗಿ ಯಾವತ್ತು ಇಲ್ಲ. ನಾನು ಪಕ್ಷದ ಕಾರ್ಯಕರ್ತ, ಪಕ್ಷದ ನಾಯಕ ಅಂತಾ ಬಿಎಸ್ವೈ ಇರೋದು ಎಂದು ಹೇಳುವ ಮೂಲಕ ನಿಗಮ ಮಂಡಳಿಯಲ್ಲಿ ಬಿಎಸ್ವೈ ಬೆಂಬಲಿಗರಿಗೆ ಕೋಕ್ ನೀಡಿದ ವಿಚಾರವಾಗಿ ಸಚಿವ ಅಶ್ವತ್ಥನಾರಾಯಣ ಈ ರೀತಿ ಪ್ರತಿಕ್ರಿಯಿಸಿದರು.