ರಾಮನಗರ:ಜಿಲ್ಲಾ ಉಸ್ತುವಾರಿ ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಗುರುವಾರ ರಾಮನಗರ ಜಿಲ್ಲೆಯ 150 ಯಾತ್ರಾರ್ಥಿಗಳ ತಂಡವು ಅಯೋಧ್ಯೆಗೆ ಆಗಮಿಸಿತು. ಈ ಯಾತ್ರಾರ್ಥಿಗಳ ತಂಡವು ಭವ್ಯವಾಗಿ ನಿರ್ಮಿಸುತ್ತಿರುವ ಶ್ರೀರಾಮ ಮಂದಿರಕ್ಕೆ 1.50 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ, ಸೀತಾ ಮಾತೆಗೆ ಸ್ಥಳೀಯ ರೇಷ್ಮೆ ಸೀರೆ, ರಾಮ - ಲಕ್ಷ್ಮಣರಿಗೆ ಶಲ್ಯಗಳನ್ನು ಸಮರ್ಪಿಸಿತು.
ಸಚಿವರ ನೇತೃತ್ವದಲ್ಲಿ ಭಕ್ತರ ತಂಡವು ರಾಮ ಮಂದಿರ ಆವರಣಕ್ಕೆ ಆಗಮಿಸಿತು. ಇಲ್ಲಿರುವ ಕನ್ನಡಿಗ ಅರ್ಚಕ ಗೋಪಾಲ್ ಭಟ್ ಅವರ ತಂಡವು ರಾಮನಗರದ ತಂಡವು ಭಕ್ತಿ - ಗೌರವಗಳೊಂದಿಗೆ ತಂದಿದ್ದ ಕಾಣಿಕೆಗೆ ವಿಧಿ ಬದ್ಧವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಶಾಸ್ತ್ರೋಕ್ತವಾಗಿ ಪೂಜಿಸಿ, ಸಚಿವರು ಮತ್ತು ಅವರ ಸಹಯಾತ್ರಾರ್ಥಿಗಳಿಗೆ ವಿತರಿಸಿದರು. ಈ ಮೃತ್ತಿಕೆಯನ್ನು ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಬಳಿಕ, ಮಂದಿರದ ಆವರಣದಲ್ಲಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್ ಮತ್ತು ವಿನ್ಯಾಸದ ಪದಾಧಿಕಾರಿಗಳಿಗೆ ಈ ಕಾಣಿಕೆಗಳನ್ನು ರಾಮನಗರ ಜಿಲ್ಲೆಯ ಪರ ಸಚಿವರು ಹಸ್ತಾಂತರಿಸಿದರು.