ರಾಮನಗರ: ಜಿಲ್ಲೆಯ 6 ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿರುವ 125 ಕೋಟಿ ರೂಪಾಯಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಬಿಡದಿಯಲ್ಲಿರುವ ಯುವಜನ ಇಲಾಖೆಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂ ಟಿ ಬಿ ನಾಗರಾಜ್ ಮತ್ತು ಮಾಗಡಿ ಶಾಸಕ ಮಂಜುನಾಥ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ಜಿಲ್ಲೆಯ ಎರಡು ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲು ಒಟ್ಟು 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈ ಪೈಕಿ ಈಗಾಗಲೇ 1,300 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಇತ್ತೀಚೆಗೆ ಇನ್ನೂ 500 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.
ರಾಮನಗರ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಜಿಲ್ಲೆಯಾಗಿದೆ. ಇಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಬೇಕು ಎಂದರೆ, ಜನರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅಭಿವೃದ್ಧಿ ಸಾಧಿಸಲು ಒಳ್ಳೆಯ ಗುಣಮಟ್ಟದ ಮೂಲ ಸೌಲಭ್ಯ ಇರಬೇಕು. ಹೀಗಾಗಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆ, ಸೇತುವೆ, ಉದ್ಯಾನ, ಶೌಚಾಲಯ, ಸಮುದಾಯ ಭವನ, ಅಂಗನವಾಡಿಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ನೆಲೆಯೂರಿರುವ ಟೊಯೋಟಾ ಮತ್ತು ಸುಜುಕಿ ಕಂಪನಿಗಳು ಇನ್ನೂ 50 ಸಾವಿರ ಜನರಿಗೆ ಉದ್ಯೋಗ ಕೊಡಲು ಸಿದ್ಧ ವಾಗಿವೆ. ಇದಕ್ಕಾಗಿ ಅರ್ಹರಿಗೆ ಕೌಶಲ್ಯಾಭಿವೃದ್ಧಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.