ರಾಮನಗರ: ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಿಗೆ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ಒಂದು ರೀತಿಯ ಹೊಸ ಪದ್ಧತಿ. ಬೇರೆ ರಾಜ್ಯಗಳಲ್ಲಿ ಈ ರೀತಿಯ ಪದ್ಧತಿ ಇದೆ. ನಮ್ಮ ರಾಜ್ಯದಲ್ಲೂ ಆ ಪದ್ಧತಿ ಜಾರಿ ಮಾಡಲಾಗಿದೆ ಎಂದರು.
ರಾಮನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಂತಹ ಬೆಳವಣಿಗೆ ಆಗಿದೆ. ಬೇರೆ ಬೇರೆ ಕ್ಷೇತ್ರದ ನಾಯಕರನ್ನು ಸ್ವಂತ ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಆ ಪದ್ಧತಿಯನ್ನು ನಮ್ಮ ರಾಜ್ಯದಲ್ಲೂ ಕೂಡ ಅನ್ವಯ ಮಾಡಲಾಗಿದೆ ಎಂದರು.
ಬಿಜೆಪಿ ಶಾಸಕರು ಮತ್ತೆ ಕಾಂಗ್ರೆಸ್ ಸೇರುತ್ತಾರೆಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚುತ್ತಿದೆ. ಕೆಲವು ಕಡೆ ಮಾತ್ರ ಪಕ್ಷ ನೆಲೆ ಉಳಿಸಿಕೊಂಡಿದೆ. ಮುಂದೆ ಅಂತಹ ಜಾಗದಲ್ಲೂ ನೆಲೆ ಕಳೆದುಕೊಳ್ಳುತ್ತದೆ.
ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಅಂತಹ ಪಕ್ಷಕ್ಕೆ ಯಾರು ಹೋಗಿ ಸೇರುತ್ತಾರೆ. ಇನ್ನೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಇಲ್ಲ. ಆಗಲೇ ಮುಖ್ಯಮಂತ್ರಿ ಹುದ್ದೆಗೆ ಸರ್ಕಸ್ ಶುರುವಾಗಿದೆ. ಯಾರು ಸಿಎಂ ಎಂದು ಕಚ್ಚಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಮ್ಮಿಂದ ಯಾರು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.