ರಾಮನಗರ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರೈತರೊಂದಿಗೆ ಉನ್ನತ ಶಿಕ್ಷಣ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಸಂವಾದ ನಡೆಸಿ, ರೈತರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ರೇಷ್ಮೆ ಮಾರುಕಟ್ಟೆ, ಮಾವು, ಬೆಂಬಲ ಬೆಲೆ , ಸಬ್ಸಿಡಿ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಇದಕ್ಕೂ ಮುನ್ನ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್ ಮಾತನಾಡಿ, ರೈತರ ಜೊತೆಯಲ್ಲಿ ಅವರ ಸಲಹೆ ಸೂಚನೆಗಳನ್ನು ಆಲಿಸಲು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯಾವ ರೀತಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು. ರೇಷ್ಮೆ ಮಾರುಕಟ್ಟೆ, ಮಾವು ಬೆಳೆ, ಬೆಂಬಲ ಬೆಲೆ , ಸಬ್ಸಿಡಿ ಸೇರಿದಂತೆ ಅನೇಕ ವಿಚಾರಗಳು ಇವೆ. ಸಮಗ್ರವಾಗಿ ರೈತರ ಸಮಸ್ಯೆಯನ್ನು ಆಲಿಸಲಾಗುವುದು ಎಂದರು.
ರೈತರೊಂದಿಗೆ ರೈತರೊಂದಿಗೆ ಕಾರ್ಯಕ್ರಮ ಮಾವು ಮತ್ತು ರೇಷ್ಮೆ ಮಾರುಕಟ್ಟೆಗಳಲ್ಲಿ ಧರ್ಮದ ವ್ಯಾಪಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮದೇ ಸರ್ಕಾರದ ಮಾರುಕಟ್ಟೆ ಇದೆ, ರೇಷ್ಮೆ ಮಾರುಕಟ್ಟೆ, ಎಪಿಎಂಸಿಗಳಿವೆ. ರೈತರಿಗೆ ಎಲ್ಲಿ ಅನುಕೂಲವಾಗುತ್ತದೋ ಅಲ್ಲಿ ವ್ಯಾಪಾರ ಮಾಡಬಹುದು ಎಂದು ಸಲಹೆ ನೀಡಿದರು.
ಬಿಜೆಪಿ ಸರ್ಕಾರ ಮೌನಿ ಸರ್ಕಾರ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ತಾರತಮ್ಯ ಇಲ್ಲ. ಎಲ್ಲರಿಗೂ ಅನುಕೂಲವಾಗುವ ರೀತಿ ಕೆಲಸ ಮಾಡಲಾಗುತ್ತಿದೆ. ರೈತರ ಬೆಳೆಗೆ ಹೆಚ್ಚಿನ ಲಾಭ ಸಿಗಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಮೊದಲು ರೈತ, ನಂತರ ವ್ಯಾಪಾರಿ. ರೈತರಿಗೆ ಲಾಭ ಸಿಗುವ ಎಲ್ಲ ಕೆಲಸಗಳನ್ನು ಮಾಡಲಾಗ್ತಿದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ್ ಅಲ್ ಖೈದಾ ಸಂಘಟನೆಯ ವಿಡಿಯೋ ಬಿಡುಗಡೆ ಮಾಡಿಸಿದ್ದೇ ಆರ್ ಎಸ್ ಎಸ್ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಅಲ್ ಖೈದಾ ಸಂಸ್ಥೆ ನಮ್ಮ ಸಮಾಜದ ನಮ್ಮ ವಿಚಾರದ ಬಗ್ಗೆ ಮೂಗು ತೂರಿಸಿರುವುದು ತಪ್ಪು. ಸಂಪೂರ್ಣವಾಗಿ ಇದನ್ನು ಖಂಡಿಸುತ್ತೇವೆ. ಅದಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ. ಈಗಾಗಲೇ ಈ ವಿಡಿಯೋ ಎಲ್ಲಿಂದ ಬಂತು ಎಂದು ಸಿಎಂ ಅವರು ತನಿಖೆಗೆ ಆದೇಶಿಸಿದ್ದಾರೆ. ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ನೀಡುವ ಮೊದಲು ಸಾಕ್ಷಿ ಏನಿದೆ ತೋರಿಸಬೇಕು. ಸುಮ್ಮನೆ ಸಂಘದ ಹೆಸರು, ಆರ್ ಎಸ್ ಎಸ್ ಹೆಸರು ಬಳಸೋದು ತಪ್ಪು. ಸಿದ್ದರಾಮಯ್ಯನವರು ಹಿರಿಯ ನಾಯಕರು, ಆಧಾರ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದರು.
ಗೃಹ ಸಚಿವರ ಗೊಂದಲದ ಹೇಳಿಕೆ ವಿಚಾರವಾಗಿ ಇದೇ ವೇಳೆ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಗೃಹ ಸಚಿವರ ಗೊಂದಲದ ಹೇಳಿಕೆ ಕುರಿತು ಈಗಾಗಲೇ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಅವರ ಹೇಳಿಕೆಯನ್ನು ಸರಿಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಭಾರತವನ್ನು ನೋಡಿ ಸ್ವಾಭಿಮಾನ ಕಲಿಯಬೇಕು: ಪಾಕ್ ಪ್ರಧಾನಿ ಇಮ್ರಾನ್ ಖಾನ್