ರಾಮನಗರ: ಮೇಕೆದಾಟು ಯೋಜನೆ ರೂಪಿಸೋಕೆ ಡಬಲ್ ಇಂಜಿನ್ ಸರ್ಕಾರ ಬೇಕಿಲ್ಲ. ಕಾಂಗ್ರೆಸ್ ಪಕ್ಷದಿಂದಲೇ ಮೇಕೆದಾಟು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಮಾತನಾಡುತ್ತಿದ್ದರು. ಮೇಕೆದಾಟು ಯೋಜನೆ ಆರಂಭಿಸುವಂತೆ ನಮ್ಮ ಪಕ್ಷದಿಂದ ಪಾದಯಾತ್ರೆ ನಡೆಸಿದ್ದೇವೆ. ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರಕ್ಕೆ ಯೋಜನೆ ಮಾಡುವ ಯೋಚನೆ ಇಲ್ಲ. ಈ ಯೋಜನೆ ಆರಂಭ ಆಗೋದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ. ಅದುವರೆಗೂ ಯೋಜನೆ ಬಗ್ಗೆ ಯಾರು ಕೂಡಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಇದಲ್ಲದೆ ರಾಜ್ಯದ ಬಿಜೆಪಿ ಸಂಸದರು ಕೂಡ ಕೇಂದ್ರದ ಬಿಜೆಪಿ ಸರ್ಕಾರದ ನಡಾವಳಿಗೆ ಬೇಸತ್ತಿದ್ದಾರೆ. ಏಳೆಂಟು ಮಂದಿ ಸಂಸದರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೆಸರು ಸಮೇತ ಬಿಜೆಪಿ ಸಂಸದರನ್ನು ಹೇಳಬಹುದು. ಶೀಘ್ರದಲ್ಲೇ ಮುಂದಿನ ದಿನಗಳಲ್ಲಿ ಎಲ್ಲವೂ ನಿಮಗೆ ತಿಳಿಯಲಿದೆ ಎಂದು ಡಿಕೆಶಿ ಹೇಳಿದರು.
ಸಾಮೂಹಿಕ ನಾಯಕತ್ವ :ನಮ್ಮದು ಸಾಮೂಹಿಕ ನಾಯಕತ್ವ. ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಹೋರಾಡುತ್ತಿದ್ದೇವೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ. ಇದಕ್ಕೆ ನಮಗೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರೇ ಬೆಂಬಲವಾಗಿ ನಿಲ್ಲಲಿದ್ದಾರೆ. ಸಾಕಷ್ಟು ಮಂದಿ ನಮ್ಮ ಪಕ್ಷ ಸೇರಲು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏನೇನು ಬದಲಾವಣೆ ಆಗಲಿದೆ ಅನ್ನೋದನ್ನು ನೀವೇ ನೋಡಲಿದ್ದೀರಿ ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿ ತಿಳಿಸಿದರು.