ರಾಮನಗರ:ಅಂತೂ ಇಂತೂ 50 ಕಿಲೋ ಮೀಟರ್ ಸಂಚರಿಸುವ ಮೂಲಕ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ನಾಲ್ಕನೇ ದಿನವೂ ಮುಂದುವರೆದಿದೆ. ಈ ಮಧ್ಯೆ ರಾಜ್ಯ ಸರ್ಕಾರ ಮತ್ತು ಪಾದಯಾತ್ರೆ ನಡೆಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ಅನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರ ಪಟ್ಟಣದಿಂದ ಹೊರಟ ಮೇಕೆದಾಟು ಪಾದಯಾತ್ರೆ ಇಂದು ಚಿಕ್ಕೇನಹಳ್ಳಿ ಗ್ರಾಮದಿಂದ ಡಿಕೆಶಿ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಆರಂಭಗೊಂಡು ಸಂಜೆಯ ವೇಳೆ ರೇಷ್ಮೆನಗರಿ ರಾಮನಗರಕ್ಕೆ ಬಂದು ತಲುಪಲಿದೆ. ಪಾದಯಾತ್ರೆ ಉದ್ದಕ್ಕೂ ಜನಸಾಗರೇ ಹರಿದು ಬರುತ್ತಿದ್ದು, ಹೋದ ಕಡೆಯಲ್ಲೆಲ್ಲ ಅದ್ಧೂರಿಯಾಗಿ ಸ್ವಾಗತ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಮನಗರದಲ್ಲಿ ಪಾದಯಾತ್ರೆ ತಡೆಯುತ್ತಿರುವ ಹಿನ್ನೆಲೆ ನಿಟ್ಟಿನಲ್ಲಿ ಸರ್ಕಾರ ಏನು ಪ್ಲಾನ್ ನಡೆಸಿದೆ ಎಂಬುದನ್ನು ನೋಡೋಣಾ. ಅವರು ಏನು ಕ್ರಮ ತೆಗೆದುಕೊಳ್ತಾರೆ ಅಂತಾ ಗೊತ್ತಾಗುತ್ತೆ ಎಂದರು. ಅದನ್ನು ಎದುರಿಸಲು ನಾವೆಲ್ಲ ಎಲ್ಲ ರೀತಿಯಿಂದಲೂ ರೆಡಿ ಇದ್ದೇವೆ. ಸರ್ಕಾರ ಅವರದ್ದು ಇದೆ. ಅವ್ರು ಏನಾದರೂ ಕ್ರಮ ಕೈಗೊಳ್ಳಲಿ. ಲೀಗಲ್ ಆಗಿ ನಾವು ಅದನ್ನು ಎದುರಿಸುತ್ತೇವೆ. ಇಚ್ಛಾಶಕ್ತಿಯಿಂದ ಪಾದಯಾತ್ರೆ ಮಾಡಿ, ಯೋಜನೆ ಜಾರಿಯಾಗಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದರು.