ಕರ್ನಾಟಕ

karnataka

ETV Bharat / state

ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಒತ್ತು: ಬಿ.ಎ. ಬಸವರಾಜು - Ramanagara developmental work

ರಾಮನಗರ ಜಿಲ್ಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ವತಿಯಿಂದ 456 ಕೋಟಿ ರೂ. ವೆಚ್ಚದಲ್ಲಿ 56 ಕಿ.ಮೀ ಉದ್ದದ ಪೈಪ್​ಲೈನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಮಾರ್ಗದಲ್ಲಿ ಬರುವ ಅಕ್ಕಪಕ್ಕದ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ತಿಳಿಸಿದರು.

Meeting
Meeting

By

Published : Aug 28, 2020, 10:16 PM IST

ರಾಮನಗರ: ಜಿಲ್ಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ವತಿಯಿಂದ 456 ಕೋಟಿ ರೂ. ವೆಚ್ಚದಲ್ಲಿ 56 ಕಿ.ಮೀ ಉದ್ದದ ಪೈಪ್​ಲೈನ್​ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಮಾರ್ಗದಲ್ಲಿ ಬರುವ ಅಕ್ಕಪಕ್ಕದ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ತಿಳಿಸಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಬಸವರಾಜು, ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಯುಜಿಡಿ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಒತ್ತು ನೀಡಲಾಗುವುದು ಎಂದರು.

ಜಿಲ್ಲೆಗೆಕಾವೇರಿನೀರು:

ರಾಮನಗರದಲ್ಲಿ 10 ವಾರ್ಡ್​ಗಳಿಗೆ ಕಾವೇರಿ ನೀರು ಪೂರೈಕೆ ಆಗುತ್ತಿದೆ. ಇನ್ನೂ 12 ವಾರ್ಡ್​ಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆ, ಎಲ್ಲಾ ವಾರ್ಡ್ ಗಳಿಗೂ ಕಾವೇರಿ ನೀರು ಪೂರೈಕೆ ಆಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

ಇದೇ ವೇಳೆ, ಚನ್ನಪಟ್ಟಣದಲ್ಲಿ ಒಟ್ಟಾರೆಯಾಗಿ 121 ಕೋಟಿ ರೂ.ಗಳ ವೆಚ್ಚದಲ್ಲಿ ಯುಜಿಡಿ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಇವುಗಳಲ್ಲೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲ. ಅಲ್ಲದೇ, ಚನ್ನಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಸಹ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಮುಗಿಸಲು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಖುದ್ದು ಪರಿಶೀಲನೆ:

ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಬೇಕು. ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಲು ಖುದ್ದಾಗಿ ಕಾಮಗಾರಿ ನಡೆಯುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸುವುದಾಗಿ ಬಿ.ಎ. ಬಸವರಾಜು ತಿಳಿಸಿದರು.

ರೈತರಿಗೂ ನಿವೇಶನ:

ಬೇಡಿಕೆಗೆ ಅನುಗುಣವಾಗಿ ಬಡಾವಣೆಗಳನ್ನು ನಿರ್ಮಿಸಲು ಜಮೀನಿನ ಅವಶ್ಯಕತೆ ಇದೆ. ಆದರೆ, ನಿರೀಕ್ಷಿಸಿದಂತೆ ಜಮೀನು ಲಭ್ಯವಾಗುತ್ತಿಲ್ಲ. ಬಡಾವಣೆ ನಿರ್ಮಾಣಕ್ಕೆ ರೈತರು ಜಮೀನನ್ನು ನೀಡಲು ಮುಂದಾದರೆ ಅವರಿಗೂ ನಿವೇಶನ ನೀಡಬೇಕು. ರೈತರು ಜಮೀನು ನೀಡಿದ ಸಂದರ್ಭದಲ್ಲಿ 50:50ರ ಪಾಲುದಾರಿಕೆಯಲ್ಲಿ ಶೇ 50 ರಷ್ಟು ನಿವೇಶನಗಳನ್ನು ರೈತರಿಗೆ ಮೀಸಲಿಡಬೇಕು ಎನ್ನುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಸಚಿವರು ಹೇಳಿದರು.

ಪತ್ರಕರ್ತರಿಗೆ ನಿವೇಶನ:

ಪ್ರಾಧಿಕಾರದ ವತಿಯಿಂದ ನೀಡಲಾಗುವ ನಿವೇಶನಗಳ ಪೈಕಿ ಶೇ. 5ರಷ್ಟನ್ನು ಪತ್ರಕರ್ತರಿಗೆ ಮೀಸಲಿಡಲಾಗಿದೆ. ಈ ಬಗ್ಗೆ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ ಎಂದರು.

ರಾಮನಗರದ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ ನಗರಾಭಿವೃದ್ಧಿ ಸಚಿವರು, ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಅವರು ತಿಳಿಸಿದರು.

ABOUT THE AUTHOR

...view details