ರಾಮನಗರ:ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಇರುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ನಿಸ್ವಾರ್ಥ ಸೇವೆಯಿಂದ ಅನಾಥ ಮಕ್ಕಳಿಗೆ ಆಶ್ರಯದಾತನಾಗಿದ್ದಾನೆ. "ಮಾತೃ ಭೂಮಿ ಮಡಿಲು" ಮಕ್ಕಳ ಸೇವಾಶ್ರಮ ಸ್ಥಾಪಿಸಿ ಶಿಕ್ಷಣದಿಂದ ವಂಚಿತವಾಗಿರುವ ಅನಾಥ ಬಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡಿ ಮಾದರಿಯಾಗಿದ್ದಾರೆ.
ಇವರ ಹೆಸರು ಮಹೇಶ್. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ನಿವಾಸಿ. ಹಳ್ಳಿಯಿಂದ ನಗರಕ್ಕೆ ಬಂದು ಅನಾಥ ಮಕ್ಕಳಿಗೆ ಭವಿಷ್ಯ ರೂಪಿಸುವ ಉದ್ದೇಶದಿಂದ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ.
ಶಿಕ್ಷಣದಿಂದ ವಂಚಿತವಾಗಿರುವ ಬಡ ಮಕ್ಕಳನ್ನ ಗುರುತಿಸಿ ಅಂತಹ ಮಕ್ಕಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. 2014ರಲ್ಲಿ ಚನ್ನಪಟ್ಟಣದ ಭಾರತಿ ನಗರದಲ್ಲಿ ಬಾಡಿಗೆ ಕಟ್ಟಡ ಪಡೆದುಕೊಂಡು ಮಾತೃ ಭೂಮಿ ಸೇವಾ ಫೌಂಡೇಶನ್ ಹೆಸರಿನಡಿಯಲ್ಲಿ ಸೇವಾ ಕೈಂಕರ್ಯ ಮಾಡಿಕೊಂಡು ಬರುತ್ತಿದ್ದಾರೆ. ಇದುವರೆಗೂ ಈ ವಸತಿ ಶಾಲೆಯಲ್ಲಿ 16 ಅನಾಥ ಮಕ್ಕಳು ಕಲಿಯುತ್ತಿದ್ದಾರೆ.
ನನಗೆ ಎಲ್ಲಾ ಇದ್ದು, ಅನಾಥನಾಗಿ ಎಲ್ಲಾ ಕಷ್ಟಗಳನ್ನ ಕೂಡ ನಾನು ಅನುಭವಿಸಿದ್ದೇನೆ. ನನ್ನ ಹಾಗೆ ಯಾರು ಕೂಡ ಅನಾಥರಾಗಬಾರದೆಂಬ ಉದ್ದೇಶದಿಂದ ಮಾತೃ ಭೂಮಿ ಸೇವಾಶ್ರಮ ಪ್ರಾರಂಭ ಮಾಡಿ ಇಲ್ಲಿ ಅನಾಥ ಮಕ್ಕಳಿಗೆ ಆಶ್ರಯ ನೀಡಲಾಗುತ್ತಿದೆ. ಈ ಆಶ್ರಮದಲ್ಲಿ ಇರುವ ಒಂದೊಂದು ಮಗುವಿನ ಹಿಂದೆ ಒಂದೊಂದು ಸಂಕಷ್ಟದ ಕಥೆಯೇ ಇದೆ. ಈ ಮಕ್ಕಳನ್ನು ನಾಡಿನ ಉನ್ನತ ವ್ಯಕ್ತಿಯನ್ನಾಗಿ ಮಾಡುವ ಉದ್ದೇಶವೇ ಟ್ರಸ್ಟ್ನ ಗುರಿಯಾಗಿದೆ. ಈ ಸೇವೆಯ ಜೊತೆಗೆ ಕಷ್ಟದಲ್ಲಿರುವ ಬಡವರಿಗೆ ಸೇವೆ ಒದಗಿಸಲು ನಮ್ಮ ಟ್ರಸ್ಟ್ ಸದಾ ಮುಂದೆ ಇರುತ್ತದೆ. ಯಾವುದೇ ಸಮಸ್ಯೆಗಳು ಎದುರಾದಾಗ ನಮ್ಮ ಟ್ರಸ್ಟ್ನಿಂದ ಆಗುವ ಸೇವೆಯನ್ನ ಕೂಡ ನಾವು ಮಾಡಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಆಶ್ರಮದ ಸಂಸ್ಥಾಪಕ ಮಹೇಶ್.