ರಾಮನಗರ: ಸಚಿವ ಸಿ.ಪಿ. ಯೋಗೇಶ್ವರ್ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಿದಾಡುತ್ತಿದೆ. ಅವರು ದೆಹಲಿಗೆ ಹೋಗುವುದು ಸಹಜ. ಅವರು ದೆಹಲಿಗೆ ಹೋಗಿರುವುದನ್ನೇ ದೊಡ್ಡದ್ದಾಗಿ ಬಿಂಬಿಸುತ್ತಿದ್ದಾರೆ.
ಯೋಗೇಶ್ವರ್ ಅವರನ್ನು ಕೆಲವು ಶಾಸಕರು ತೇಜೋವಧೆ ಮಾಡುತ್ತಿದ್ದಾರೆ ಎಂದು ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಯೋಗೇಶ್ವರ್ ಪರ ಬ್ಯಾಟಿಂಗ್.. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಯೋಗೇಶ್ವರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ಖಂಡಿಸುತ್ತೇವೆ. ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.
ಸಿಪಿವೈ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಆದ್ರೆ, ಅವರು ಯಾಕೆ ರಾಜೀನಾಮೆ ಕೊಡಬೇಕು? ಮುಂದಿನ ದಿನಗಳಲ್ಲಿ ರೇಣುಕಾಚಾರ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ಅವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆಂದು ಅಸಮಾಧಾನ ಹೊರ ಹಾಕಿದರು.
ಯೋಗೇಶ್ವರ್ ಅವರೇ ಹೇಳಿದ್ದಾರೆ ಸರ್ಕಾರ ಕೆಡುವ ಶಕ್ತಿ ಇಲ್ಲ ಅಂತ. ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರಿಗೆ ಬೆಲೆ ಕೊಡುತ್ತಿದ್ದಾರೆ. ಸರ್ಕಾರ ಬರಲು ಮುಖ್ಯ ಕಾರಣ ಯೋಗೇಶ್ವರ್ ಅವರು. ಅವರಿಗೆ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕಾಗಿತ್ತು. ಈ ಬಗ್ಗೆ ಅವರ ಮನಸ್ಸಿನಲ್ಲಿ ನೋವು ಇದೆ ಎಂದರು.
ಮೆಗಾಸಿಟಿ ವಿಚಾರ ಯೋಗೇಶ್ವರ್ ಅವರ ಸ್ವಂತ ವಿಚಾರ, ಅವರು ಯಾರಿಗೂ ಮೋಸ ಮಾಡಿಲ್ಲ. ವಿರೋಧ ಪಕ್ಷದವರು ಯೋಗೇಶ್ವರ್ ಅವರಿಗೆ ಸ್ಥಾನಮಾನ ಸಿಗದಂತೆ ತಂತ್ರ ಮಾಡಿದ್ರು.
ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರ ಮುಂದೆ ಹೋಗಿ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಹಾಗಾಗಿ, ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದರು.
ಯೋಗೇಶ್ವರ್ ಅವರಿಗೆ ಬೇರೆ ಜಿಲ್ಲೆಯ ಉಸ್ತುವಾರಿ ಕೊಡಬಹುದಿತ್ತು. ಹಳೇ ಮೈಸೂರು ಭಾಗದ ಉಸ್ತುವಾರಿ ಕೊಡಬಹುದಿತ್ತು. ಅವರಿಗೆ ಸರಿಯಾದ ಸ್ಥಾನಮಾನ ಕೊಡಬೇಕು. ಅವರಿಗೆ ಉಸ್ತುವಾರಿ ಸಚಿವರ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.