ಕರ್ನಾಟಕ

karnataka

ETV Bharat / state

ಗ್ರಾಮೀಣ ಭಾಗದ ಕಾರ್ಮಿಕರಿಗೆ ಕೆಲಸ ಒದಗಿಸಲು 'ದುಡಿಯೋಣ ಬಾ' ಅಭಿಯಾನ - ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆ ದುಡಿಯೋಣ ಬಾ ಅಭಿಯಾನ

ಬೇಸಿಗೆ ಅವಧಿಯಲ್ಲಿ 60 ದಿನಗಳ ಕೆಲಸ ಮಾಡಿದರೆ ರೂ. 17,340 ಹಣ ಗಳಿಸಬಹುದು ಹಾಗೂ ಜನರು ಈ ಹಣವನ್ನು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಾದ ಬೀಜ, ರಸಗೊಬ್ಬರ, ಮಕ್ಕಳನ್ನು ಶಾಲಾ-ಕಾಲೇಜಿಗೆ ದಾಖಲಿಸಲು ಶುಲ್ಕ ಪಾವತಿಸಬಹುದು. ಇದಲ್ಲದೇ ಇನ್ನಿತರೆ ವೆಚ್ಚಗಳಿಗೆ ಬಳಸಿಕೊಳ್ಳಬಹುದು.

mahatma-gandhi-national-employment-scheme-dudiyona-ba-campaign
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆ

By

Published : Mar 18, 2021, 7:53 PM IST

ರಾಮನಗರ: ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಇರುವ ಜನರು ನಗರ ಪ್ರದೇಶಕ್ಕೆ ತೆರಳಿ ಕೆಲಸದ ಹುಡುಕಾಟ ಪ್ರಾರಂಭಿಸುತ್ತಾರೆ. ಕೆಲವರಿಗೆ ಕೆಲಸ ದೊರೆಯುತ್ತದೆ, ಕೆಲವರು ಕೆಲಸ ಸಿಗದೇ ನಿರಾಸೆಯಿಂದ ಜೀವನ ನಡೆಸುತ್ತಾರೆ. ಸದ್ಯ ಇದಕ್ಕೆ ಮುಕ್ತಿ ಹಾಡಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆಯಡಿ 'ದುಡಿಯೋಣ ಬಾ ಅಭಿಯಾನ' ಎಂಬ ಅಭಿಯಾನವನ್ನು ಸರ್ಕಾರ ಪ್ರಾರಂಭಿಸಿದೆ.

ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಬೇಸಿಗೆ ಸಮಯದಲ್ಲಿ 60 ದಿನಗಳ ಉದ್ಯೋಗದ ಖಾತ್ರಿ ನೀಡಲಿದೆ. ಈ ಅಭಿಯಾನವು ಜಿಲ್ಲೆಯಲ್ಲಿ ಮಾರ್ಚ್ 15ರಿಂದ ಪ್ರಾರಂಭವಾಗಿ ಜೂನ್ 15ರವರೆಗೆ ನಡೆಯಲಿದೆ.

ಅಭಿಯಾನದ ಪ್ರಯೋಜನ ಏನು ಗೊತ್ತಾ?

ಬೇಸಿಗೆ ಅವಧಿಯಲ್ಲಿ 60 ದಿನಗಳ ಕೆಲಸ ಮಾಡಿದರೆ ರೂ. 17,340 ಹಣ ಗಳಿಸಬಹುದು ಹಾಗೂ ಜನರು ಈ ಹಣವನ್ನು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಾದ ಬೀಜ, ರಸಗೊಬ್ಬರ, ಮಕ್ಕಳನ್ನು ಶಾಲಾ-ಕಾಲೇಜಿಗೆ ದಾಖಲಿಸಲು ಶುಲ್ಕ ಪಾವತಿಸಬಹುದು. ಇದಲ್ಲದೇ ಇನ್ನಿತರೆ ವೆಚ್ಚಗಳಿಗೆ ಬಳಸಿಕೊಳ್ಳಬಹುದು. ಬೇರೆ ಸ್ಥಳಗಳಿಗೆ ಹೋಗಿ ಕೆಲಸ ಹುಡುಕುವ ಬದಲು ಸ್ಥಳೀಯವಾಗಿ ವಾಸಿಸುವ ಸ್ಥಳದಲ್ಲೇ ಕೆಲಸ ಪಡೆದು ಉತ್ತಮವಾಗಿ ಜೀವನ ನಡೆಸಬಹುದು.

ಅಭಿಯಾನದ ಕಾರ್ಯವಿಧಾನ

ಮಾ. 15ರಿಂದ ಮಾ. 22ರವರೆಗೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ಈ ವೇಳೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು, ಯುವ ಸಂಘಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಉದ್ಯೋಗ ಚೀಟಿ ಇಲ್ಲದೆ ಇರುವ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಸ್ವೀಕರಿಸಲಿದ್ದಾರೆ. ಉದ್ಯೋಗ ಚೀಟಿ ಇರುವ ನೋಂದಾಯಿತ ಕೂಲಿಕಾರರಿಂದ 3 ತಿಂಗಳ ಕೆಲಸದ ಬೇಡಿಕೆಯನ್ನು ಸ್ವೀಕರಿಸಲಿದ್ದಾರೆ.

ಮಾ. 23ರಿಂದ 31ರವರೆಗೆ ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗುವುದು. ಕೆಲಸದ ಬೇಡಿಕೆ ಸಲ್ಲಿಸುವ ಕೂಲಿಕಾರರಿಗೆ ಕೆಲಸ ಒದಗಿಸಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿ ಮತ್ತು ಕಾಮಗಾರಿ ಪ್ರಾರಂಭಕ್ಕೆ ಬೇಕಿರುವ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುವುದು.

ಸಮಿತಿ ರಚನೆ

ಅಭಿಯಾನದ ಉಸ್ತುವಾರಿಗಾಗಿ ಜಿಲ್ಲೆಯಲ್ಲಿ 3 ಹಂತದಲ್ಲಿ ಸಮಿತಿ ರಚಿಸಲಾಗಿಚೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ, ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ ಎಂದು ರಾಮನಗರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details