ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ರಾಮನಗರ:ರಾಜಕಾರಣದಲ್ಲಿ ಚರ್ಚೆಗಳು, ಊಹಾಪೋಹಗಳು ಮಾಮೂಲಿ. ಗಾಳಿ ಸುದ್ದಿಗಳನ್ನ ಪ್ರಚಾರ ಮಾಡ್ತಾರೆ. ಎಲ್ಲವುದಕ್ಕೂ ಚುನಾವಣೆ ಪ್ರಕ್ರಿಯೆ ಶುರುವಾದಾಗ ಉತ್ತರ ಸಿಗುತ್ತದೆ. ನನ್ನ ಮುಂದೆ ಯಾವುದೇ ಪ್ರಸ್ತಾವನೆಗಳು ಬಂದಿಲ್ಲ ಎಂದು ಲೋಕಸಭಾ ಹೊಂದಾಣಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ವಿಚಾರವಾಗಿ ಅವರು ಮಾತನಾಡುತ್ತಿದ್ದರು. ನಾನು ಸಂಸದ ಸ್ಥಾನಕ್ಕೆ ನಿಲ್ಲಬೇಕು ಅನ್ನೋ ನಿರ್ಧಾರ ಇನ್ನು ಆಗಿಲ್ಲ. ಕಳೆದ ಐದು ದಿನಗಳಿಂದ ಜಿಲ್ಲಾವಾರು ಸಭೆ ಮಾಡಿದ್ದೇನೆ. ಸೋತವರು, ಗೆದ್ದವರು ಎಲ್ಲರೂ ಒಟ್ಟಿಗೆ ಸಭೆ ಮಾಡಿದ್ದೇನೆ. ಇವತ್ತಿಗೂ ಸಹ ನಮ್ಮ ಜೊತೆಗೆ ನಿಲ್ಲುವುದಾಗಿ ಹೇಳಿದ್ದಾರೆ ಎಂದು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿದರೆ ಅನುಕೂಲ ಆಗುತ್ತಾ..? ಏನ್ ಮಾಡಬೇಕು ಅನ್ನೋದು ಆ ಸಂದರ್ಭದಲ್ಲಿ ಚರ್ಚೆ ಮಾಡಿದ್ರೆ ಸೂಕ್ತ ಎಂದು ಇದೇ ವೇಳೆ ತಿಳಿಸಿದರು.
ಇನ್ನು ಕಾಮಗಾರಿಗಳನ್ನ ನೂತನ ರಾಜ್ಯ ಸರ್ಕಾರ ತಡೆಹಿಡಿದಿರುವ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಮೀಟಿಂಗ್ನಲ್ಲಿ ಎಲ್ಲವೂ ಪ್ರಸ್ತಾಪ ಮಾಡುತ್ತೇವೆ. ನೂತನ ಸರ್ಕಾರದಲ್ಲಿ ಹಿಂದಿನ ಹಲವಾರು ಸರ್ಕಾರದ ನಿರ್ಣಯದ ಬಗ್ಗೆ ತನಿಖೆ ಮಾಡುತ್ತಾರಂತೆ. ಕಳೆದ ಒಂದು ತಿಂಗಳಿನಿಂದ ಹಲವಾರು ಮಂತ್ರಿಗಳು ಹೇಳುತ್ತಲೇ ಇದ್ದಾರೆ. ಅದೆಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಮಾಡ್ತಾರೆ ನೋಡೋಣ ಎಂದು ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಪರಿಶೀಲನೆ ವಿಚಾರವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ರಾಷ್ಟ್ರ ರಾಜಕಾರಣ ಕಡೆ ಒಲವಿದ್ಯಾ ಎಂಬ ಪ್ರಶ್ನೆಗೆ ಹೆಚ್ಡಿಕೆ ಪ್ರತಿಕ್ರಿಯೆ ನೀಡಿ, ನನಗೆ ರಾಜಕಾರಣ ಕಡೆಯೇ ಒಲವಿಲ್ಲ. ಕಾರ್ಯಕರ್ತರಿಗೋಸ್ಕರ ಇದ್ದೇನೆ. ನಾನು ಸಿಎಂ ಸ್ಥಾನ ಬಿಟ್ಟ ದಿನವೇ ತೀರ್ಮಾನ ಮಾಡಬೇಕು ಅಂದುಕೊಂಡಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಸಂಸದ ಡಿಕೆ ಸುರೇಶ್ ಭ್ರಷ್ಟಾಚಾರ ಬಗ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಿನ ಸಂಸದರು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಬಹಳ ನಿರಾಸೆಯಾಗಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಅವರೇ ಯೋಚನೆ ಮಾಡಬೇಕಾದರೆ ನನ್ನಂತವನ ಸ್ಥಿತಿ ಏನಾಗಬೇಕು..?, ಯಾಕಂದ್ರೆ ಸಾಕ್ಷಿ ಗುಡ್ಡೆಗಳು ಬಹಳ ಇವೆ. ದೊಡ್ಡ ದೊಡ್ಡ ಕಲ್ಲು ಗುಡ್ಡೆಗಳು ನೆಲದ ಸಮಕ್ಕೆ ತಂದು ನಿಲ್ಲಿಸಿದ್ದಾರೆ. ಅಂತವರೇ ಈ ಪರಿಸ್ಥಿತಿ ಇರುವಾಗ ನಾನು ಯಾವ ರೀತಿ ಚುನಾವಣೆ ಎದುರಿಸಲಿ..?, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ತೀವಿ ಎಂದಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ರಾಜಕೀಯ ನಿವೃತ್ತಿ ಬಗ್ಗೆ ಲೇವಡಿ ಮಾಡಿದ್ದಾರೆ.
ನಿನ್ನೆಯಷ್ಟೆ ಶಕ್ತಿ ಯೋಜನೆಗೆ ಚಾಲನೆ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ಇದ್ಯಾವ ಯೋಜನೆಗಳಿಗೂ ನಾನು ತಲೆಕೆಡಿಸಿಕೊಳ್ಳಲ್ಲ. ಈ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡೋಕೆ ಇನ್ನೂ ಸಮಯ ಇದೆ. ನನಗೆ ಆತುರ ಇಲ್ಲ. ಮುಂದೆ ಚರ್ಚೆ ಮಾಡೋಣ ಎಂದರು.
ಎರಡೂ ರಾಷ್ಟ್ರೀಯ ಪಕ್ಷಗಳಿಂದ ವಿದ್ಯುತ್ ದರ ಏರಿಕೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಮುಂದೆ ಆಗುವ ಅನಾಹುತಗಳ ಬಗ್ಗೆ ಹೇಳಿದ್ದೆ ಎಂದು ವಿದ್ಯುತ್ ದರ ಹೆಚ್ಚಳ ವಿರುದ್ಧ ಮಾತನಾಡಿದರು.
ಚುನಾವಣೆ ಮುಗಿದು ಹೊಸ ಸರ್ಕಾರ ರಚನೆ ಆಗಿದೆ. ಇಂದು ಇಲಾಖಾವಾರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೇನೆ. ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಅಧಿಕಾರಿಗಳಿಂದ ಮಾಹಿತಿ ಪಡೆದು ಅದನ್ನ ಬಗೆಹರಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಅದರ ಬಗ್ಗೆ ಕೂಡಾ ಚರ್ಚೆ ಮಾಡುತ್ತೇನೆ. ಕಾಡಾನೆ ತಡೆಯಲು ತಡೆಗೋಡೆ ನಿರ್ಮಾಣ ಮಾಡಬೇಕು. ತಡೆಗೋಡೆ ನಿರ್ಮಿಸಲು ಕೆಲವೊಂದು ತಕರಾರು ಇದೆ. ಎಲ್ಲವನ್ನೂ ಹಂತಹಂತವಾಗಿ ಸರಿಪಡಿಸುವ ಕೆಲಸ ಮಾಡ್ತೇವೆ ಎಂದು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಓದಿ:ನಾವೇನು ಕಾಂಗ್ರೆಸ್ ಜೊತೆ ಹೋಗೋಕೆ ಆಗುತ್ತಾ? ಈಗ ಕಾಂಗ್ರೆಸ್ನವರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ: ಕುಮಾರಸ್ವಾಮಿ