ರಾಮನಗರ :ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಅವರ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಸಾಮಾನ್ಯ ಪ್ರಜೆಯ ಬಾಳನ್ನು ರೂಪಿಸಲೆಂದು ಹಚ್ಚಿಟ್ಟಿರುವ ಬೆಳ್ಳಿ ಹಣತೆಯೇ ನಮ್ಮ ಸಂವಿಧಾನ.
ಒಕ್ಕೂಟ ವ್ಯವಸ್ಥೆಯಲ್ಲಿ ಬಾಳುತ್ತಿರುವ ನಾವೆಲ್ಲರೂ ರಾಷ್ಟ್ರದ ಸಾರ್ವಭೌಮತೆ ಗೌರವಿಸಿ, ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ ಎಂದು ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ.. ಡಿಸಿಎಂ ಅಶ್ವತ್ಥ್ ನಾರಾಯಣ್ 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕಟ್ಟಿಕೊಟ್ಟಿದ್ದು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಹಿರಿಯರ ತಂಡ.
ಅವರ ಅವಿರತ ಪ್ರಯತ್ನ, ಅವಿಚ್ಛಿನ್ನ ದೇಶಪ್ರೇಮ ಮತ್ತು ಅದ್ಭುತ ಅನುಭವಿ ಪಾಂಡಿತ್ಯದಿಂದಾಗಿ ನಮಗೆ ದೊರೆತದ್ದು ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ, ಅತ್ಯಂತ ಸುಸಂಬದ್ಧವಾದ ಲಿಖಿತ ಸಂವಿಧಾನ. ನಮ್ಮೆಲ್ಲರ ಆಶಯಗಳನ್ನು ಪ್ರತಿಬಿಂಬಿಸುವ ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮ ಕರ್ತವ್ಯ ಎಂದರು.
ನಮ್ಮದೇ-ದೇಶ, ನಮ್ಮದೇ- ಸಂವಿಧಾನ, ನಮ್ಮದೇ- ಆಡಳಿತ, ನಾವು ಸ್ವತಂತ್ರರಾಗಿ ಬದುಕುತ್ತೇವೆ ಎನ್ನುವ ಶಪಥವನ್ನು ಸಮಸ್ತ ಭಾರತೀಯರೂ ಕೈಗೊಂಡ ದಿನವೇ ನಮ್ಮ ಗಣರಾಜ್ಯ ದಿನ. ಸಹಜವಾಗಿ ಅದು ನಮಗೆ ಉತ್ಸವದ ದಿನ. ಗಣರಾಜ್ಯೋತ್ಸವ ನಮಗೆ ಅತ್ಯಂತ ಪವಿತ್ರ ದಿನವೂ ಆಗಿದೆ ಎಂದು ಬಣ್ಣಿಸಿದರು.
ಒಕ್ಕೂಟ ವ್ಯವಸ್ಥೆ :ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು, ಭಾರತದ ಸಾರ್ವಭೌಮತೆಗೆ ಧಕ್ಕೆ ತರದಂತೆ, ತನ್ನ ಅಸ್ಮಿತೆಯನ್ನೂ ಉಳಿಸಿಕೊಂಡು ಅಭಿವೃದ್ಧಿಯೆಡೆಗೆ ಸಾಗುತ್ತಿರುವ ನಮ್ಮ ರಾಜ್ಯದ ಸಾಧನೆ ಇಂದು ದೇಶದ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ. ಜ್ಞಾನಾಧಾರಿತ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪತ್ತು, ವೈಶಿಷ್ಟ್ಯಪೂರ್ಣ ಸಾಮಾಜಿಕ ಚಿಂತನೆ, ಪ್ರಯೋಗಶೀಲ ಆಡಳಿತ ಇವೆಲ್ಲವೂ ಕರ್ನಾಟಕದ ಹೆಗ್ಗುರುತು ಎಂದರು.
ನಾವೆಲ್ಲರೂ ಅಭಿವೃದ್ಧಿಯೊಂದಿಗೆ ಕರ್ನಾಟಕ ಹಾಗೂ ಭಾರತವನ್ನು ಸಶಕ್ತ, ಸದೃಢ ಪ್ರಜಾಪ್ರಭುತ್ವ ದೇಶವನ್ನಾಗಿ ರೂಪಿಸಲು ಶ್ರಮಿಸೋಣ. ಮೇಲು, ಕೀಳು, ಬಡವ, ಬಲ್ಲಿದನೆಂಬ ಬೇಧ-ಭಾವ ಮರೆತು ಒಗ್ಗಟ್ಟಿನಿಂದ ರಾಷ್ಟ್ರ ನಿರ್ಮಾಣ ಮಾಡೋಣ. ಸ್ನೇಹ, ಪ್ರೀತಿ, ಸೋದರ ಭಾವದ ಸೆಲೆ ನಮ್ಮ ಜೀವಾಳವಾಗಲಿ ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಹಾರೈಸಿದರು.