ರಾಮನಗರ :ತಾಲೂಕಿನ ಮಂಚಶೆಟ್ಟಿಹಳ್ಳಿದೊಡ್ಡಿ ಗ್ರಾಮದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಸುಮಾರು ಮೂರು ವರ್ಷದ ಗಂಡು ಚಿರತೆ ಚಲಿಸುವ ರೈಲಿಗೆ ಸಿಲುಕಿ ಸಾವನ್ನಪ್ಪಿದೆ.
ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮಂಚಶೆಟ್ಟಿಹಳ್ಳಿದೊಡ್ಡಿಯಲ್ಲಿ ಕರಡಿ, ಚಿರತೆ, ಕಾಡು ಹಂದಿ ಸೇರಿದಂತೆ ಹಲವಾರು ವನ್ಯಜೀವಿಗಳು ಅರಣ್ಯದಲ್ಲಿವೆ.
ರಾತ್ರಿ ವೇಳೆ ಆಹಾರ ಅರಸುತ್ತ ಗ್ರಾಮದ ಬಳಿ ಬಂದ ಚಿರತೆ, ಪಕ್ಕದಲ್ಲೇ ಹಾದುಹೋಗಿದ್ದ ರೈಲು ಹಳಿ ದಾಟುವಾಗ ಆಕಸ್ಮಿಕವಾಗಿ ಚಲಿಸುವ ರೈಲಿಗೆ ಸಿಲುಕಿದೆ. ರೈಲು ಗುದ್ದಿದ ರಭಸಕ್ಕೆ ಸ್ಥಳದಲ್ಲಿಯೇ ಚಿರತೆ ಸಾವನ್ನಪ್ಪಿದೆ ಎನ್ನಲಾಗಿದೆ.
ರೈಲು ಹಳಿ ಸಮೀಪ ಚಿರತೆಸತ್ತುಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.