ರಾಮನಗರ:ಆಹಾರ ಅರಸಿ ಬಂದ ಚಿರತೆಯೊಂದು ಮನೆಗೆ ನುಗ್ಗಿ ಮಗುವನ್ನೇ ಕದ್ದೊಯ್ದು ತಿಂದು ಪರಾರಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮನೆಗೆ ನುಗ್ಗಿ ಮಗು ಹೊತ್ತೊಯ್ದು ತಿಂದು ಹಾಕಿದ ಚಿರತೆ - ರಾಮನಗರದಲ್ಲಿ ಚಿರತೆ ದಾಳಿ
ಚಿರತೆಯೊಂದು ಮನೆಗೆ ನುಗ್ಗಿ ಮಗುವನ್ನೇ ಎಳೆದೊಯ್ದು ತಿಂದಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಕದರಯ್ಯನ ಪಾಳ್ಯದ ಹೇಮಂತ್ (3) ಚಿರತೆ ದಾಳಿಗೆ ಬಲಿಯಾದ ದುರ್ದೈವಿ. ತಡ ರಾತ್ರಿ ಮನೆಗೆ ನುಗ್ಗಿದ ಚಿರತೆ ಮಲಗಿದ್ದ ಮಗುವನ್ನು ಮನೆಯಿಂದ ಸುಮಾರು ಅರವತ್ತು ಮೀಟರ್ ನಷ್ಟು ಮುಂದೆ ಹೊತ್ತೊಯ್ದು ಅರೆ ಬರೆ ತಿಂದು ಪೊದೆಯಲ್ಲಿ ಬಿಟ್ಟು ಹೋಗಿದೆ. ತಡರಾತ್ರಿ ಜೋರು ಮಳೆಯಾಗಿದ್ದರಿಂದ ಕರೆಂಟ್ ಹೋಗಿತ್ತು ಎನ್ನಲಾಗಿದೆ. ಸೆಕೆ ತಡೆಯಲಾಗದೇ ಮನೆಯವರು ಬಾಗಿಲು ತೆರೆದು ಮಲಗಿದ್ದರು. ಈ ವೇಳೆ, ಚಿರತೆ ಒಳ ನುಗ್ಗಿ ಮಗುವನ್ನು ಹೊತ್ತೊಯ್ದಿದೆ.
ತಾಯಿ ಮಗುವನ್ನು ಹುಡುಕಾಡಿದಾಗ ಮಗು ಕಾಣದೆ ಕಂಗಾಲಾಗಿದ್ದಾರೆ. ಅಲ್ಲದೇ ಮನೆಯಲ್ಲಾ ಜಾಲಾಡಿದ್ದಾರೆ. ಮಗು ಕಾಣದೆ ಹೊರಗಡೆ ಹೋಗಿರಬಹುದೆಂದು ಹುಡುಕಾಡಿದಾಗ ಮನೆಯಿಂದ ಸುಮಾರು ಅರವತ್ತು ಮೀಟರ್ ದೂರದ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.