ರಾಮನಗರ :ಸಂಸದರು ಹಾಗೂ ಕೇಂದ್ರ ಸಚಿವರು ಮೋದಿ ಮುಂದೆ ಮಾತನಾಡಲು ಹೆದರುತ್ತಿದ್ದಾರೆ. ಎಲ್ಲಿ ನಮ್ಮ ಸ್ಥಾನಗಳು, ಅಧಿಕಾರ ಹೋಗುತ್ತದೆಯೋ ಅಂತಾ ಭಯ ಪಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಲಿ, ಮೇಕೆದಾಟು ವಿಚಾರವಾಗಲಿ, ಮೋದಿ ಮುಂದೆ ಮಾತನಾಡಲು ಬೊಮ್ಮಾಯಿ, ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಅವರುಗಳಿಗೆ ಧೈರ್ಯವಿಲ್ಲ. ಉಸಿರು ನಿಂತು ಹೋಗುತ್ತದೆ. ಧೈರ್ಯವಾಗಿ ಮಾತನಾಡುವ ಶಕ್ತಿಯನ್ನ ಹಿರಿಯ ಬಿಜೆಪಿ ಮುಖಂಡರು ಕಳೆದುಕೊಂಡಿದ್ದಾರೆ ಎಂದರು.
ಮೇಕೆದಾಟು ವಿಚಾರದಲ್ಲಿ ಸಚಿವರುಗಳ ಹೇಳಿಕೆ ಪ್ರಚಾರಕ್ಕಾಗಿ ಅಷ್ಟೇ.. ಅವರಿಗೆ ಧೈರ್ಯ, ಬದ್ಧತೆಯಿದ್ದರೆ ಪ್ರಧಾನಮಂತ್ರಿ ಹಾಗೂ ಕೇಂದ್ರ ನೀರಾವರಿ ಸಚಿವರನ್ನ ನೇರವಾಗಿ ಭೇಟಿ ಮಾಡಲಿ ನೋಡೋಣ. ರಾಜ್ಯದ 25 ಸಂಸದರು ಹೋರಾಟ ಮಾಡಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಬೇಕು.
ಅದರಲ್ಲಿಯೂ ಬೆಂಗಳೂರಿನಲ್ಲಿರುವ 3 ಮಂದಿ ಸಂಸದರು ಹೋರಾಟ ಮಾಡಬೇಕು. ಕಾರಣ ಈ ಯೋಜನೆಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಈ ಯೋಜನೆಗೆ ಕ್ರೇತ್ರದ ಜನರಾಗಿ ನಾವು ತಕರಾರು ಮಾಡಬೇಕು. ನಾವೇ ಮಾಡಿ ಅಂತಾ ಹೇಳುತ್ತಿದ್ದೇವೆ. ಎಷ್ಟು ಜಮೀನು ಹೋದರೂ ಹೋಗಲಿ ಜನರನ್ನ ನಾವು ಒಪ್ಪಿಸುತ್ತೇನೆ ಎಂದರು.