ರಾಮನಗರ :ಹಗರಣಗಳನ್ನು ಸರ್ಕಾರದ ಪ್ರಭಾವದಿಂದಷ್ಟೇ ಮುಚ್ಚಿ ಹಾಕಲು ಸಾಧ್ಯ. ಪಿಎಸ್ಐ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ನಾಲ್ಕೈದು ಜನ ಆಯ್ಕೆಯಾಗಿದ್ದು, ಮೊದಲ ಸ್ಥಾನವನ್ನೂ ಪಡೆದಿದ್ದಾರೆ. ಇವರು ನಮಗೆ ಬೇಕಾದ ಹುಡುಗರೇ ಆಗಿದ್ದು, ಈಗ ಹಗರಣದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಅವರಿಗೆ ಈ ಅಕ್ರಮದಲ್ಲಿ ಮಂತ್ರಿಗಳು ಸಹಾಯ ಮಾಡಿದ್ದಾರೋ, ಅವರ ಕುಟುಂಬದವರು ಮಾಡಿದ್ದಾರೋ, ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಜಿಲ್ಲೆಯ ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದೆ. ನಾನು ಆ ಊರಿನ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ಸರ್ಕಾರ ಈ ಅಕ್ರಮ ನೇಮಕಾತಿಗೆ ಅಂಗಡಿ ತೆರೆದ ಕಾರಣಕ್ಕೆ ಇವರುಗಳು ಅಲ್ಲಿಗೆ ಹೋಗಿದ್ದಾರೆ. ಅವರು ಅಂಗಡಿ ತೆರೆಯದಿದ್ದರೆ ಯಾರಾದರೂ ಇದರಲ್ಲಿ ಭಾಗಿಯಾಗುತ್ತಿದ್ದರಾ ಎಂದು ವಾಗ್ದಾಳಿ ನಡೆಸಿದರು.
ಪಿಎಸ್‌ಐ ಅಕ್ರಮ ನೇಮಕಾತಿ ಕುರಿತಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿರುವುದು.. ಪ್ರಭಾವಿಗಳೇ ಇಂತಹ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ-ಮಠ, ಆಸ್ತಿ-ಪಾಸ್ತಿ ಮಾರಿಕೊಂಡು, ಸಾಲ ಮಾಡಿ, ಅಕ್ರಮ ಪ್ರಯತ್ನ ಮಾಡಿ ಸಿಕ್ಕಿಬಿದ್ದಿದ್ದಾರೆ. ಲಂಚ ಕೊಟ್ಟವರಾರೂ ಲಂಚ ಕೊಟ್ಟಿದ್ದೇನೆ ಎಂದು ಹೇಳುವುದಿಲ್ಲ. ಅದನ್ನು ಪಡೆದವನು ಕೂಡ ಲಂಚ ಪಡೆದಿರುವುದಾಗಿ ಹೇಳುವುದಿಲ್ಲ.
ಆದರೆ, ವಿಚಾರಣೆಗೆ ನೋಟಿಸ್ ಕೊಟ್ಟು, ಮಂತ್ರಿ ಸಂಬಂಧಿ ಪ್ರಭಾವ ಬೀರಿದರು ಎಂದು ವಿಚಾರಣೆ ಮಾಡದೇ ವಾಪಸ್ ಕಳುಹಿಸಲಾಗಿದೆ. ಪೊಲೀಸರು ಯಾರನ್ನು, ಯಾವ ರೀತಿ ವಿಚಾರಣೆ ಮಾಡಿದ್ದಾರೆ? ಮೊದಲನೇ ಸ್ಥಾನ ಪಡೆದವರನ್ನು ವಶದಲ್ಲಿಟ್ಟುಕೊಂಡು, ನಾಲ್ಕನೇ ಸ್ಥಾನ ಪಡೆದವರನ್ನು ಬಿಟ್ಟು ಕಳುಹಿಸಿರುವುದೇಕೆ ಎಂದು ಕಿಡಿಕಾರಿದರು.
ಸಚಿವರ ಹೆಸರು ತಳುಕು :ಈ ಪ್ರಕರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಹೆಸರು ಕೇಳಿ ಬಂದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಅತ್ಯಂತ ಹೆಚ್ಚು ಭ್ರಷ್ಟ ಸಚಿವ ಎಂದರೆ ಅದು ಅಶ್ವತ್ಥ್ ನಾರಾಯಣ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಮೇಲ್ನೋಟಕ್ಕೆ ನಾನು ಬ್ರಾಹ್ಮಣರಂತೆ ಶುದ್ಧವಾಗಿದ್ದೇನೆ. ಬಹಳ ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸಿಕೊಳ್ಳುವ ಅಗತ್ಯವೇನಿದೆ? ಅವರ ನಡೆ-ನುಡಿಗಳು, ಮಾತನಾಡುವ ರೀತಿ ನೋಡಿದರೆ ಅವರು ಏನೆಂದು ಜನರಿಗೆ ಅರ್ಥವಾಗುತ್ತದೆ ಎಂದು ಹರಿಹಾಯ್ದರು.
ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ ಕಾರಣ ತಮ್ಮನ್ನು ಗುರಿಯಾಗಿಸಲಾಗಿದೆ ಎಂಬ ಅಶ್ವತ್ಥ್ ನಾರಾಯಣ ಹೇಳಿಕೆ ವಿಚಾರವಾಗಿ ಮಾತನಾಡಿ, ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಈ ಜಿಲ್ಲೆಯಲ್ಲಿ ಆಗಿರುವುದು ಅನಾಹುತ ಸತ್ಯ. ಆ ಬಗ್ಗೆ ಹೇಳಿದ್ದೇವೆ. ಅವರೇನೋ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಅವರು ತಡ ಮಾಡದೇ ಎಲ್ಲವನ್ನೂ ಬಿಚ್ಚಿಡಲಿ. ನಮಗೆ ಏನು ಬೇಕಾದರೂ ಮಾಡಲಿ, ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧವಿದ್ದೇವೆ ಎಂದು ಸವಾಲು ಹಾಕಿದರು.
ಹೆಚ್ಡಿಕೆ ವಿರುದ್ಧವೂ ಗರಂ :ಕಾಂಗ್ರೆಸ್ನವರ ಬಳಿ ದಾಖಲೆ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ಬಳಿ ದಾಖಲೆ ಇದೆಯೋ, ಇಲ್ಲವೋ? ಅದು ಬೇರೆ ಪ್ರಶ್ನೆ. ಹಾಗಾದರೆ, ಈ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ 17 ಜನರನ್ನು ಬಂಧನ ಮಾಡಿರುವುದೇಕೆ?. ಕಾಂಗ್ರೆಸ್ ತನಿಖೆ ಮಾಡುವ ಸಂಸ್ಥೆಯೇ?. ನಾವು ವಿರೋಧ ಪಕ್ಷದವರು. ಯಾರು ಎಷ್ಟು ಸ್ಥಾನ ಪಡೆದಿದ್ದಾರೆ ಎಂಬ ಬಗ್ಗೆ ಜನರೇ ನಮಗೆ ಮಾಹಿತಿ ನೀಡಿದ್ದಾರೆ.
ಕೆಲವು ಅಧಿಕಾರಿಗಳೂ ಮಾಹಿತಿ ನೀಡಿದ್ದು, ನಾನು ಅವರ ಹೆಸರು ಹೇಳುವುದಿಲ್ಲ. ಮಾಧ್ಯಮಗಳಿಗೆ ಹೇಗೆ ಮೂಲಗಳ ಮೂಲಕ ದಾಖಲೆ, ಮಾಹಿತಿಗಳು ಸಿಗುತ್ತವೋ, ಅದೇ ರೀತಿ ನಮಗೂ ಲಭ್ಯವಾಗುತ್ತವೆ. ಕುಮಾರಸ್ವಾಮಿ ಅವರು ಅವರ ಮಾಹಿತಿ ಮೂಲ ಬಹಿರಂಗ ಪಡಿಸುತ್ತಾರಾ ಎಂದು ಮರು ಪ್ರಶ್ನೆ ಹಾಕಿದರು.
ಇದನ್ನೂ ಓದಿ:ಎಲ್ಲದಕ್ಕೂ ಕಾಲ ಬರಬೇಕು.. ಹಾಗೇ ಕಾಂಗ್ರೆಸ್ ಸೇರುವುದಕ್ಕೂ ಕಾಲ ಬರಬೇಕು: ವೈ.ಎಸ್.ವಿ. ದತ್ತ