ರಾಮನಗರ : ಯಾರು ಹೇಳಿದ್ದು, 15 ಗೆಲ್ತಾರೆ ಅಂತಾ? ಅವರು 25 ಸ್ಥಾನವನ್ನ ಗೆಲ್ಲಬಹುದು. 15 ಗೆಲ್ಲೋದಾದ್ರೆ ಯಾವುದು 10 ಸೋಲುತ್ತಾರೆ ಅನ್ನೋದನ್ನ ಹೇಳಬೇಕಲ್ಲ ಅವರು ಎಂದು ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕನಕಪುರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ಚುನಾವಣೆ ಎಂದ ಮೇಲೆ ಸೋಲು-ಗೆಲುವು ಸಹಜ. ಈಗಲೇ ನಾವು ಇಷ್ಟು ಗೆಲ್ಲುತ್ತೇವೆಂದು ಹೇಳುವ ಬಿಜೆಪಿ ಎಲ್ಲೆಲ್ಲಿ ಸೋಲಾಗುತ್ತದೆಂದು ಧೈರ್ಯವಿದ್ದರೆ ಈಗಲೇ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.
ಪರಿಷತ್ ಚುನಾವಣೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿರುವುದು.. ಬಿಜೆಪಿಗೆ ಜೆಡಿಎಸ್ಸಪೋರ್ಟ್ ಕೊಡೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅವರು ಯಾವತ್ತು ಕಿತ್ತಾಡ್ತಾರೋ, ಯಾವತ್ತು ಒಂದಾಗ್ತಾರೋ ಅವರಿಗೆ ಗೊತ್ತು. ಅವರ ಪಾರ್ಟಿ ವಿಚಾರಕ್ಕೆ ನಾನು ಯಾಕೆ ಮಾತನಾಡಲಿ.
ಸದ್ಯ ನಮ್ಮ ಪಾರ್ಟಿ ಮೆಂಬರ್ಸ್ ಹಾಗೂ ಮತದಾರರಿಗೆ ಮನವಿ ಮಾಡುತ್ತೇನೆ. ಈಗ ಬದಲಾವಣೆಯ ಅವಶ್ಯಕತೆ ಇದೆ. ಹೀಗಾಗಿ, ಯಾವುದೇ ಪಕ್ಷ ಇಲ್ಲದೇ ಗ್ರಾಮ ಪಂಚಾಯತ್‌ನಲ್ಲಿ ಗೆದ್ದಿದ್ದೀರಾ.. ನಮಗೆ ಬೆಂಬಲಿಸಿ ಎಂದು ಮನವಿ ಮಾಡಲು ಬಂದಿದ್ದೇನೆ ಎಂದರು.
ಇದಲ್ಲದೆ ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‌ನವರು ಹೈಜಾಕ್ ಮಾಡುತ್ತಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿದ ಅವರು, ನಾನು ಯಾವ ಹೈಜಾಕ್ ಮಾಡುತ್ತಿಲ್ಲ. ಬಂದ್ರೆ ಜೊತೆಯಲ್ಲೇ ಕರೆದುಕೊಂಡು ಹೋಗುತ್ತೇನೆ. ನೀರನ್ನ ನಾನು ಒಬ್ಬನೇ ಬಳಸುವುದಿಲ್ಲ. ಬೆಂಗಳೂರಿನಲ್ಲಿ ಎಲ್ಲರೂ ಬಳಸುತ್ತಾರೆ ಎಂದರು.
ನಾನು ಬಿಜೆಪಿ, ಜೆಡಿಎಸ್ ಹಾಗೂ ಇತರೆ ಹೋರಾಟಗಾರರು, ಸಂಘಗಳಿಗೂ ಆಮಂತ್ರಣ ಮಾಡುತ್ತೇನೆ. ಜೊತೆಲಿ ಬರ್ಲಿ ಅಷ್ಟೇ.. ಮೇಕೆದಾಟು ಉಳಿಸಿ ಬೆಂಗಳೂರಿಗೆ ನೀರು ಕೊಡಿ ಎಂದು ಹೋರಾಟ ಮಾಡುವುದಾಗಿ ಡಿಕೆಶಿ ತಿಳಿಸಿದ್ದಾರೆ. ಬಿಜೆಪಿ ಅವರದ್ದು ಡಬಲ್ ಎಂಜಿನ್ ಸರ್ಕಾರ ಇದ್ದ ಹಾಗೆ. ಮೇಕೆದಾಟು ವಿಚಾರದಲ್ಲಿ ಯಾವುದೇ ಕಾನೂನು ತೊಡಕಿಲ್ಲ ಎಂದು ಆಗಲೇ ಸಿಎಂ ಹೇಳಿದ್ದಾರೆ.
ಆದ್ರೆ, ಕೇಂದ್ರ ಸರ್ಕಾರ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಕೊಡಬೇಕು ಎನ್ನುತ್ತಿದ್ದಾರೆ. ಮೇಕೆದಾಟು ನಿರ್ಮಾಣ ಜಾಗದಲ್ಲಿ ನನ್ನದು ಕೂಡ ಜಮೀನಿದೆ. ಆದ್ರೆ, ನಾವು ಯಾರೂ ತಕರಾರು ಮಾಡುತ್ತಿಲ್ಲ. ಅಲ್ಲಿ ಎರಡು ಮೂರು ಹಳ್ಳಿ ಮುಳುಗಿ ಹೋಗುತ್ತವೆ. ರಾಜ್ಯಕ್ಕೆ ಒಳೆಯದಾಗಲಿ ಅಂತಾ ಅಲ್ಲಿಗೆ ಹೋಗಿ ನ್ಯಾಯ ಪಂಚಾಯತ್ ಮಾಡಿದ್ದೇನೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಇದಲ್ಲದೆಯೇ ಬಿಟ್ ಕಾಯಿನ್ ವಿಚಾರ ಮುಗಿದು ಹೋದ ಅಧ್ಯಾಯ ಎಂಬ ಗೃಹ ಸಚಿವ ಹೇಳಿಕೆಗೆ ಅಸೆಂಬ್ಲಿನಲ್ಲಿ ಟೈಮ್ ಇದೆ. ಅಲ್ಲೇ ಮಾತನಾಡುತ್ತೇನೆ ಎಂದು ತಿಳಿಸಿದರು.