ರಾಮನಗರದಲ್ಲಿ ಸ್ಟಾಲಿನ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ರೈತ ಸಂಘಟನೆಗಳಿಂದ ರಾಮನಗರ ಬಂದ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ ಗೌಡ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಬಾಯಿ ಬಡಿದುಕೊಂಡು 'ಮತ್ತೆ ಹುಟ್ಟಿ ಬರಬೇಡಿ' ಎಂದು ಸ್ಟಾಲಿನ್ ಅಣಕು ತಿಥಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
"ಸರ್ಕಾರ ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು. ರಾಜ್ಯದ ಜನರ ಹಿತವನ್ನು ಬಲಿ ಕೊಡುವ ಬದಲು, ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಬೇಕು. ನಾಡಿನ ಜೀವನದಿ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳಬಾರದು" ಎಂದು ರಮೇಶ ಗೌಡ ಒತ್ತಾಯಿಸಿದರು.
ಇದನ್ನೂ ಓದಿ:ಕಾವೇರಿ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ, ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ರಕ್ತ ಚಳವಳಿ: ನಗರದ ಕೆಂಗಲ್ ಹನುಮಂತಯ್ಯನವರ ವೃತ್ತದಲ್ಲಿ ರೈತ ಸಂಘ ಹಾಗೂ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ರಕ್ತ ಚಳವಳಿ ನಡೆಸಿದ್ದಾರೆ. ಸಿರಿಂಜ್ ಮೂಲಕ ರಕ್ತ ತೆಗೆದು ರಸ್ತೆಯಲ್ಲಿ ಚೆಲ್ಲುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ನಮಗೆ ನೀರಿಲ್ಲದ ವೇಳೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಿಲ್ಲ. "ರಕ್ತ ಬೇಕಾದರೂ ಕೊಟ್ಟೇವು, ಆದರೆ ನೀರು ಮಾತ್ರ ಕೊಡಲಾರೆವು" ಎಂದು ರೈತ ಹಾಗೂ ಪ್ತತಿಭಟನಾಕಾರರು ತಮಿಳುನಾಡು ಸಿಎಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರಾಮನಗರ ಜಿಲ್ಲಾ ವಕೀಲರ ಸಂಘ ಕೂಡ ಕಲಾಪ ಬಹಿಷ್ಕರಿಸಿ ಕಾವೇರಿ ಹೋರಾಟ ಬೆಂಬಲ ನೀಡಿ, ಪ್ರತಿಭಟನೆ ನಡೆಸಿದೆ.
ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಪೊಲೀಸರು ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಏರ್ಪೋರ್ಟ್ಗೆ ತಟ್ಟದ ಬಂದ್ ಬಿಸಿ:ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಬಂದ್ ಪರಿಣಾಮ ಬೀರಿಲ್ಲ. ಆತಂಕದಲ್ಲೇ ಏರ್‌ಪೋರ್ಟ್‌ನತ್ತ ಬಂದ ಪ್ರಯಾಣಿಕರು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ನಿಟ್ಟುಸಿರುಬಿಟ್ಟು ತಮ್ಮ ಪ್ರಯಾಣ ಮುಂದುವರೆಸಿದ್ದಾರೆ. ವಿಮಾನ ನಿಲ್ದಾಣ ಇಂದು ಎಂದಿನಂತೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಮಧ್ಯಾಹ್ನ ಮತ್ತು ಸಂಜೆ ಇರುವ ವಿಮಾನಗಳಿಗೆ ಮುಂಚಿತವಾಗಿ ಬಂದಿರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು.
ಇದನ್ನೂ ಓದಿ:ಕಾವೇರಿ ಹೋರಾಟಗಾರರನ್ನು ರಾತ್ರೋರಾತ್ರಿ ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಕಿಡಿಗೇಡಿತನದ ಪರಮಾವಧಿ: ಹೆಚ್ಡಿಕೆ ಕಿಡಿ