ರಾಮನಗರ: ನಾವು ನಮ್ಮ ಮೂಲ ಮರೆತರೆ ಫಲ ಸಿಗುವುದಿಲ್ಲ ಎಂಬ ಮಾತನ್ನು ಆಗಾಗ್ಗೆ ಹೇಳುತ್ತಿರುತ್ತೇನೆ. ಅದೇ ರೀತಿ ಈ ಕಟ್ಟಡಕ್ಕೆ ಜಾಗ ದಾನ ಮಾಡಿದ್ದ ಸಾಹುಕಾರರ ಕುಟುಂಬವನ್ನು ಸ್ಮರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರದಲ್ಲಿ ನೂತನವಾಗಿ ಕಟ್ಟಿರುವ ಹೆರಿಗೆ ಆಸ್ಪತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಸದ ಡಿ ಕೆ ಸುರೇಶ್ ಅವರು ಇನ್ಫೊಸಿಸ್ ಸಂಸ್ಥೆ ಜತೆ ಚರ್ಚೆ ಮಾಡಿ, ನಮ್ಮ ತಾಲೂಕಿನ ಜನರಿಗೆ ನೆರವು ನೀಡಲು ಆಸ್ಪತ್ರೆ ನಿರ್ಮಾಣ ಮಾಡಿಸಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು. ಈ ಕ್ಷೇತ್ರದಲ್ಲಿ ಒಂದು ಕಾರ್ಖಾನೆ, ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಈ ಭಾಗದ ಜನ ಬೆಂಗಳೂರಿಗೆ ವಲಸೆ ಹೋಗುತ್ತಿದ್ದರು. ಇದನ್ನು ನಿಯಂತ್ರಣ ಮಾಡಲು ನಾನು ನನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ನಾನು ಸಂಪೂರ್ಣ ಯಶಸ್ಸು ಸಾಧಿಸಿದ್ದೇನೆ ಎಂದು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
50 ಕೋಟಿ ಮೌಲ್ಯದ ಆಸ್ಪತ್ರೆ: ಇನ್ಫೋಸಿಸ್ ಸಂಸ್ಥೆಯವರು ಇಂದು ನಮ್ಮ ತಾಲೂಕಿನಲ್ಲಿ 50 ಕೋಟಿ ಮೌಲ್ಯದ ಆಸ್ಪತ್ರೆಯನ್ನು ಕಟ್ಟಿದ್ದಾರೆ. ಆ ಮೂಲಕ ನನ್ನ ತಾಯಂದಿರು ಹಾಗೂ ಸಹೋದರಿಗೆ ರಕ್ಷಣೆ ಸಿಕ್ಕಂತಾಗಿದೆ. ಈ ಆಸ್ಪತ್ರೆಗೆ ಹಣ ಬರಬೇಕಾದರೆ ಸುಧಾಮೂರ್ತಿ ಅವರ ಹೃದಯ ಶ್ರೀಮಂತಿಕೆ ಹಾಗೂ ಸಂಸ್ಥೆಯ ಎಲ್ಲ ಅಧಿಕಾರಿಗಳ ಶ್ರಮ ಮುಖ್ಯವಾಗಿದೆ. ಈ ಸಂಸ್ಥೆ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಶುದ್ಧ ಆಡಳಿತದ ಮೂಲಕ ಶ್ರೇಷ್ಠ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದೆ. ಅವರು ಎರಡನೇ ಹಂತದ ನಗರಗಳಿಗೆ ಆದ್ಯತೆ ನೀಡುವ ಉದ್ದೇಶ ಹೊಂದಿದ್ದರು. ಹೀಗಾಗಿ ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡದಲ್ಲಿ ಆದ್ಯತೆ ಮೇರೆಗೆ ಇನ್ಫೋಸಿಸ್ ಸಂಸ್ಥೆಗೆ ಅವಕಾಶ ನೀಡಿದರು. ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಸರ್ಕಾರದ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳನ್ನು ನನ್ನ ಹತ್ತಿರ ಕಳುಹಿಸಿದಾಗ ನಾನು ಹೋಗಿ ಇನ್ಫೋಸಿಸ್ ಸಂಸ್ಥೆ ಕಟ್ಟಡಗಳನ್ನು ನೋಡುವಂತೆ ತಿಳಿಸಿದ್ದೆ. ಈ ಸಂಸ್ಥೆಯಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ಸಂಗ್ರಹವಾಗುತ್ತಿದೆ. ಉದ್ಯೋಗ ಸೃಷ್ಟಿ ಆಗುತ್ತಿದೆ. ಅಷ್ಟೊಂದು ಕೊಡುಗೆ ಕೊಟ್ಟಿರುವ ಸಂಸ್ಥೆ ಇನ್ಫೋಸಿಸ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.