ರಾಮನಗರ:ಕನಕಪುರ ವಿಧಾನಸಭಾ ಮತಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭದ್ರಕೋಟೆ. ದಶಕಗಳಿಂದ ವಿರೋಧಿಗಳಿಲ್ಲದೇ ಪಾರುಪತ್ಯ ಸಾಧಿಸಿದ್ದ ಡಿಕೆಶಿಗೆ ಟಕ್ಕರ್ ಕೊಡಲು ಬಿಜೆಪಿಯಿಂದ ಸಚಿವ ಆರ್.ಅಶೋಕ್ ಕಣದಲ್ಲಿದ್ದಾರೆ. ಹಾಗೆಯೇ ಸ್ಥಳೀಯ ಜೆಡಿಎಸ್ ಅಭ್ಯರ್ಥಿಯಾದ ನಾಗರಾಜ್ ಸಂಪ್ರದಾಯಿಕ ಮತಗಳನ್ನು ಸೆಳೆದರೇ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೂ ಅಚ್ಚರಿ ಪಡಬೇಕಿಲ್ಲ.
ಕನಕಪುರ ಬಂಡೆ ಸೋಲಿಸಲು ಬಿಜೆಪಿ ರಣತಂತ್ರ:ಈ ಬಾರಿ ಕನಕಪುರ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ಅವರು ಅಂದುಕೊಂಡಷ್ಟು ಗೆಲುವು ಸುಲಭವಲ್ಲ ಎನ್ನಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿದ್ದರಿಂದ ಅವರೇ ಬಲಿಷ್ಠ ಹುರಿಯಾಳಾಗಿದ್ದರು. ಅವರಿಗೆ ತೀವ್ರ ಪೈಪೋಟಿ ನೀಡಲು ಜೆಡಿಎಸ್ ಮತ್ತು ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಿವೆ.
ಈ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬಲಿಷ್ಠ ಒಕ್ಕಲಿಗ ನಾಯಕ ಆರ್.ಅಶೋಕ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಬಿಜೆಪಿ ಪಕ್ಷದಿಂದ ಆರ್.ಅಶೋಕ್ರನ್ನು ಕಣಕ್ಕಿಳಿಸುವ ಮೂಲಕ ಡಿಕೆಶಿ ಸೋಲಿಸಲು ಬಿಜೆಪಿ ರಣವ್ಯೂಹ ಹೆಣೆದಿದೆ.
ಆರ್ ಅಶೋಕ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ್ ಸಿಂಗ್ ಸೇರಿದಂತೆ ಸಿ.ಟಿ.ರವಿ, ಡಾ.ಅಶ್ವಥ್ ನಾರಾಯಣ್ ಸೇರಿ ಹಲವು ನಾಯಕರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ.ರವಿ ಕನಕಪುರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಈ ಬಾರಿ ಕನಕಪುರ ಕೋಟೆಯಲ್ಲಿ ಕಮಲ ಅರಳಿಲಿದೆ ಎಂಬುದು ಬಿಜೆಪಿ ಮುಖಂಡರ ಅಭಿಮತವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪರ ಕ್ಷೇತ್ರದಲ್ಲಿ ಒಲವು:ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಲ್ಲಿ ಬಲಿಷ್ಠ ನಾಯಕರಾಗಿ ಬೆಳೆದಿದ್ದಾರೆ. ಸತತ ಒಟ್ಟು 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿಕೆಶಿ, ಕನಕಪುರ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬರುವ ಮುನ್ನ ಸಾತನೂರು ಕ್ಷೇತ್ರದಿಂದ 4 ಬಾರಿ ಶಾಸಕರಾಗಿದ್ದರು. ತದನಂತರ 2008 ರಿಂದ ಕನಕಪುರ ಕ್ಷೇತ್ರ ಪ್ರತಿನಿಧಿಸಿ, ಅಂದಿನಿಂದ ಈವರೆಗೆ ಕಳೆದ 15 ವರ್ಷಗಳಿಂದ ಸೋಲಿಲ್ಲದ ಸರದಾರರಾಗಿ ಒಂದೇ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಇವರ ಗೆಲುವಿನ ಅಂತರ ಏರುತ್ತಲೇ ಇದ್ದಿದ್ದು ಇವರ ಜನಬೆಂಬಲಕ್ಕೆ ಸಾಕ್ಷಿಯಾಗಿದೆ.
ಅಲ್ಲದೆ ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿರುವ ಡಿಕೆ ಶಿವಕುಮಾರ್ಗೆ ಈ ಕ್ಷೇತ್ರದಲ್ಲಿ ವಿರೋಧಿಗಳೇ ಇಲ್ಲ. ಬಿಜೆಪಿಯಿಂದ ಆರ್.ಅಶೋಕ್ ಕಣದಲ್ಲಿ ಇದ್ದರೂ ಕೂಡ ಅವರು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ. ಅಶೋಕ್ ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರಾದರೂ ಕೂಡ ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ. ಈ ಕ್ಷೇತ್ರಕ್ಕೆ ಅವರು ಬರೇ ಅತಿಥಿ. ನಮ್ಮ ಆತಿಥ್ಯವನ್ನು ಸ್ವೀಕರಿಸಲು ಕ್ಷೇತ್ರಕ್ಕೆ ಬಂದಿದ್ದಾರೆ. ನಾವು ಕೂಡ ಅವರಿಗೆ ಒಳ್ಳೇ ಆತಿಥ್ಯವನ್ನು ನೀಡಿ ಕಳುಹಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ.
ಡಿಕೆಶಿ ಪರ ಪತ್ನಿ ಉಷಾ ಶಿವಕುಮಾರ್ ಪ್ರಚಾರ:ಇತ್ತ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಮಡದಿ ಉಷಾ ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ. ನಗರ ಹಾಗೂ ಗ್ರಾಮೀಣ ಎರಡು ಕಡೆಯಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಡಿಕೆಶಿ ಪತ್ನಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗೋದು ಕಡಿಮೆ. ಆದರೆ ಚುನಾವಣೆ ಬಂದಾಗ ಮಾತ್ರ ತಮ್ಮ ಪತಿ ಪರ ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಪತಿ ಈ ಬಾರಿ ಬಹುಮತ ಪಡೆದು ಗೆಲ್ಲಲಿದ್ದಾರೆ ಎಂದು ಸ್ವತಃ ಡಿಕೆಶಿ ಪತ್ನಿ ಉಷಾ ಶಿವಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಾಗರಾಜು ಜೆಡಿಎಸ್ನಿಂದ ಸ್ಥಳೀಯ ಅಸ್ತ್ರ:ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗೆ ಟಕ್ಕರ್ ಕೊಡಲು ಕನಕಪುರ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಜೆಡಿಎಸ್ ಮಣೆ ಹಾಕಿದೆ. ಕನಕಪುರ ಕ್ಷೇತ್ರದ ಮಾಜಿ ಪುರಸಭೆ ಅಧ್ಯಕ್ಷರಾಗಿದ್ದ ಎಸ್.ನಾಗರಾಜುರವರನ್ನು ಕಣಕ್ಕೆ ಇಳಿಸಿದೆ. ನಾಗರಾಜು ತಮ್ಮ ನಿಷ್ಠಾವಂತ ಜೆಡಿಎಸ್ ಮುಖಂಡರೊಡನೆ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ.ಕನಕಪುರದಲ್ಲಿ ಈ ಹಿಂದೆ ಸಾತನೂರು ಕ್ಷೇತ್ರ ಅಸ್ತಿತ್ವದಲ್ಲಿ ಇದ್ದಾಗ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಸಹ ಸ್ಪರ್ಧೆ ಮಾಡಿದ್ದರು. ಜನತಾ ಪರಿವಾರದ ನಾಯಕರಾಗಿದ್ದ ಪಿಜಿಆರ್ ಸಿಂಧ್ಯಾ ಕನಕಪುರದ ಶಾಸಕರಾಗಿ ಅನೇಕ ಬಾರಿ ಗೆಲುವು ದಾಖಲಿಸಿದ್ದರು. ಇಂದಿಗೂ ಇಲ್ಲಿ ಜೆಡಿಎಸ್ ತನ್ನ ಸಾಂಪ್ರದಾಯಿಕ ಮತಗಳನ್ನು ಹೊಂದಿದೆ. ಹೀಗಾಗಿ ಅಭ್ಯರ್ಥಿ ಯಾರೇ ಇದ್ದರೂ ಪಕ್ಷ ನಿಷ್ಠೆ ಪ್ರದರ್ಶಿಸುವ ಕಾರ್ಯಕರ್ತರು ಇಲ್ಲಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಕಡೆಯ ಕ್ಷಣದಲ್ಲಿ ನಾರಾಯಣ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಪ್ರಚಾರದ ಕೊರತೆ ನಡುವೆಯೂ 47 ಸಾವಿರ ಮತಗಳು ಜೆಡಿಎಸ್ ಪರವಾಗಿ ಚಲಾವಣೆಗೊಂಡಿರುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ನಮ್ಮದು ಕೇವಲ ಡಬಲ್ ಇಂಜಿನ್ ಸರ್ಕಾರವಲ್ಲ, ಸೂಪರ್ ಪವರ್ ಸರ್ಕಾರ: ಜೆಪಿ ನಡ್ಡಾ