ರಾಮನಗರ:ಆದಿವಾಸಿಗಳು ಸಾಕುತ್ತಿದ್ದ ದಷ್ಟ-ಪುಷ್ಟ ಕಪ್ಪು ಕೋಳಿ ಮಾಗಡಿಯಲ್ಲಿ ಜನಪ್ರಿಯಗೊಳ್ಳುತ್ತಿದೆ. ರುಚಿಯಲ್ಲಿ ನಾಟಿ ಕೋಳಿಗೂ ಒಂದು ಕೈ ಮಿಗಿಲಾಗಿರುವ ಖಡಕ್ನಾಥ್ ತಳಿಯ ಕಪ್ಪು ಕೋಳಿಯನ್ನ ಮಾಂಸ ಪ್ರಿಯರು ಹೆಚ್ಚು ಹುಡುಕಾಟ ನಡೆಸುವಂತೆ ಮಾಡಿದೆ.
ಈ ಕೋಳಿ ಬಗ್ಗೆ ಗೊತ್ತಾ...!
ಕಡು ಗಪ್ಪು ಬಣ್ಣದ ಕೋಳಿಯ ರಕ್ತ, ಮಾಂಸ.. ಅಷ್ಟೇ ಏಕೆ ಮೂಳೆಯ ಬಣ್ಣವು ಕೂಡ ಕಪ್ಪು ಆಗಿರುತ್ತೆ. ಈ ಕೋಳಿಗಳು ಇಡುವ ಮೊಟ್ಟೆಗಳು ಸಹ ಕಪ್ಪು ಬಣ್ಣದಾಗಿದೆ. ಇದಲ್ಲದೇ ಇದರ ಮಾಂಸವು ಕೊಬ್ಬಿನಾಂಶದಿಂದ ಮುಕ್ತವಾಗಿದ್ದು, ರೋಗ ನಿರೋಧಕ ಶಕ್ತಿ ಹೊಂದಿದೆ. ಇದನ್ನು ಔಷಧ ತಯಾರಿಕೆಗೂ ಕೂಡ ಬಳಸಲಾಗುತ್ತೆ. ಹಿಮೋಗ್ಲೊಬಿನ್ ಪ್ರಮಾಣ ಹೆಚ್ಚಲು, ನರ ದೌರ್ಬಲ್ಯ, ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಈ ಮಾಂಸವನ್ನ ಹೆಚ್ಚಾಗಿ ಬಳಸಲಾಗುತ್ತದೆ.
ರಾಮನಗರ ಜಿಲ್ಲೆಯಲ್ಲಿ ಫೇಮಸ್ ಆಗುತ್ತಿದೆ ಖಡಕ್ನಾಥ್ ಕೋಳಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹನುಮಂತಪುರದಲ್ಲಿ ಈ ನಾಟಿ ಕರಿ ಕೋಳಿಯನ್ನು ಸಾಕಲಾಗಿದೆ. ಕೆಎಸ್ಆರ್ಟಿಸಿ ನೌಕರ ವಿಜಯಕುಮಾರ್ ಎಂಬುವವರೇ ಈ ಕರಿ ಕೋಳಿಯನ್ನ ಸಾಕಿರುವವರು. ಸುಮಾರು 2,700 ಕೋಳಿಯನ್ನು ಇವರು ಸಾಕಿದ್ದಾರೆ. ಈ ಕಪ್ಪು ಕೋಳಿಯನ್ನ ಮಧ್ಯ ಪ್ರದೇಶದಿಂದ ತಂದು ಸಾಕುತ್ತಿದ್ದಾರೆ. ಅಲ್ಲಿ ಈ ಕೋಳಿಯನ್ನ ಆದಿವಾಸಿಗಳು ಹೆಚ್ಚಾಗಿ ತಿನ್ನುತ್ತಿದ್ದರು ಎನ್ನಲಾಗಿದೆ. ನಂತರ ಈ ಕೋಳಿಯನ್ನ ಇಲ್ಲಿಗೆ ತಂದು ಕಾಡಿನ ವಾತಾವರಣಕ್ಕೆ ಹೊಂದಿಸಲು ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ.
ಮೊದ ಮೊದಲು ಸಾಕಷ್ಟು ಕೋಳಿಗಳು ಸಾವನ್ನಪ್ಪಿವೆ. ನಂತರ ಹಂತ ಹಂತವಾಗಿ ಕೋಳಿಗೆ ಆಹಾರ ಹಾಗೂ ಪೂರಕ ವಾತಾವರಣ ನಿರ್ಮಿಸಿ ಕೋಳಿಗಳ ಬೆಳವಣಿಗೆಗೆ ತಜ್ಞರ ಸಲಹೆ ಪಡೆದು ಕೋಳಿ ಸಾಕಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಈ ಕೋಳಿಗಳಿಗೆ ನಿತ್ಯ ಜೋಳ, ಅಕ್ಕಿ, ರಾಗಿ ಸಜ್ಜೆ, ಸೇರಿದಂತೆ ದವಸ ಧಾನ್ಯಗಳನ್ನ ಕೋಳಿಗೆ ಆಹಾರವಾಗಿ ನೀಡಲಾಗುತ್ತಿದೆ. ಇನ್ನು ಈ ಕೋಳಿ ಮಾಂಸಕ್ಕೆ ಭಾರಿ ಬೇಡಿಕೆ ಕೂಡ ಇದೆ. ಸಾಮಾನ್ಯ ಕೋಳಿಗಳ ಮಾಂಸ ಹೊಲಿಸಿದ್ರೆ ಈ ಕರಿ ಕೋಳಿಗಳ ಮಾಂಸ ಭಾರಿ ದುಬಾರಿಯಾಗಿದೆ.
ಈ ಕೋಳಿ ಪ್ರತಿ ಕೆಜಿ ಮಾಂಸಕ್ಕೆ 650 ರೂ. ಇದೆ. ಬೆಂಗಳೂರಿನಲ್ಲಿ ಒಂದು ಕೆಜಿ 800ರಿಂದ 900 ರೂ.ವರೆಗೂ ಕೂಡ ಇದೆಯಂತೆ. ಒಟ್ಟಿನಲ್ಲಿ ರಾಮನಗರ ಜಿಲ್ಲೆಯಲ್ಲಿ ಕರಿ ಕೋಳಿ ಮಾಂಸಕ್ಕೆ ಜನ ಫಿದಾ ಆಗಿರುವುದಂತೂ ಸತ್ಯ