ಕರ್ನಾಟಕ

karnataka

ETV Bharat / state

2023ರ ಚುನಾವಣೆಗೆ ಜೆಡಿಎಸ್​​ನಿಂದ 30-35 ಮಹಿಳೆಯರಿಗೆ ಟಿಕೆಟ್: ಹೆಚ್​​ಡಿಕೆ - ರಾಮನಗರ

ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಶೇ. 33 ರಷ್ಟು ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ- ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ.

jds work shop
ಜೆಡಿಎಸ್ ಮಹಿಳಾ ಕಾರ್ಯಗಾರ

By

Published : Sep 29, 2021, 10:37 PM IST

ರಾಮನಗರ:2023ರ ಚುನಾವಣೆಗೆ ಜೆಡಿಎಸ್​ನಿಂದ 30-35 ಟಿಕೆಟ್ ಮಹಿಳೆಯರಿಗೆ ಮೀಸಲಿಡುತ್ತೇವೆ. ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಬಿಜೆಪಿ, ಕಾಂಗ್ರೆಸ್​​ಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದ್ದು, ಇದನ್ನು ಸರಿ‌ ಮಾಡುವ ಕೆಲಸ ಮಾಡುತ್ತೇವೆ ಎಂದು ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್​​ನಿಂದ 30-35 ಮಹಿಳೆಯರಿಗೆ ಟಿಕೆಟ್: ಹೆಚ್​​ಡಿಕೆ

ಬಿಡದಿಯಲ್ಲಿ ನಡೆಯುತ್ತಿರುವ ಜೆಡಿಎಸ್ 3ನೇ ದಿನ‌ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಹೆಚ್​​ಡಿಕೆ, 2023ರ ಚುನಾವಣೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಹೇಗೆ ನಡೆಸಬೇಕೆಂಬ ಚರ್ಚೆ ಮಾಡಲಾಗುವುದು.‌ ಪ್ರತಿ ಕ್ಷೇತ್ರದಲ್ಲಿ 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನ ಪ್ರತಿ ಮಹಿಳಾ ನಾಯಕಿಯರಿಗೆ ನೀಡಲಾಗುತ್ತದೆ.‌ ಈ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಕೊಡಲಾಗುವುದು ಎಂದರು.

ಮಾಜಿ‌ ಪ್ರಧಾನಿ ಹೆಚ್.ಡಿ.ದೇವೇಗೌಡರು ಶೇ.33 ಮಹಿಳೆಯರಿಗೆ ಚುನಾವಣೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಧ್ವನಿ ಎತ್ತಿದವರು. ಆದರೆ ಕಾಂಗ್ರೆಸ್- ಬಿಜೆಪಿ ಸರ್ಕಾರ ಮೀಸಲಾತಿ ಜಾರಿ ಮಾಡಲಿಲ್ಲ. ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಶೇ. 33 ರಷ್ಟು ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದರು.

ಮಹಿಳೆಯರ ಸಾಲ ಮನ್ನಾ ಮಾಡಬೇಕು:

ಹೆಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. 'ಜನತಾ ಪರ್ವ 1.O' / 'ಮಿಷನ್ 123' ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಆಯೋಜಿಸಲಾಗಿರುವ ಜೆಡಿಎಸ್ ಸಂಘಟನಾ ಕಾರ್ಯಗಾರ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸಾಲ ಮನ್ನಾ ಮಾಡಿ ಎಂದು ಕೇಳುತ್ತಿದ್ದಾರೆ. ಕಷ್ಟದಲ್ಲಿ ಇರುವ ಮಹಿಳೆಯರ ನೆರವಿಗೆ ಧಾವಿಸಬೇಕು. ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ‌ ನೀಡಿ. ಇದು ನಾನು ಕುಮಾರಸ್ವಾಮಿ ಅವರಿಗೆ ನೀಡುವ ಮುಖ್ಯವಾದ ಸಲಹೆ. ರೈತರು ಮಾಡಿದ ಸಾಲ ಮನ್ನಾ ಕ್ರಾಂತಿಕಾರಿ ಕ್ರಮ. ಹಾಗೆಯೇ ಕುಟುಂಬ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ ಮಹಿಳೆಯರು ಸಾಲ ಮಾಡಿಕೊಂಡಿದ್ದಾರೆ. ಮುಂದೆ ನೀವು ಅಧಿಕಾರಕ್ಕೆ ಬಂದರೆ ಅಂತಹ ಮಹಿಳೆಯರ ಸಾಲವನ್ನೂ ಮನ್ನಾ ಮಾಡಿ ಎಂದರು.

ಪಂಚರತ್ನ ಯೋಜನೆ ರೂಪಿಸುವ ಯೋಚನೆ ಶ್ಲಾಘನೀಯ. ಇದರ ಜತೆಗೆ ಉಚಿತ ಶಿಕ್ಷಣ ನೀಡಿದರೆ ಸಮಾಜಕ್ಕೆ, ರಾಜ್ಯಕ್ಕೆ ಇನ್ನೂ ಒಳ್ಳೆಯದು. ಉಚಿತ ಆರೋಗ್ಯ ಯೋಜನೆ ಮಾಡಿದರೆ ಒಳ್ಳೆಯದು. ಈ ಮೂಲಕ ಬಡಜನರ ಆರೋಗ್ಯ ಬವಣೆ ತಪ್ಪುತ್ತದೆ. ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಅನಿತಾ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಉತ್ತಮ ಅವಕಾಶಗಳಿವೆ. ಚುನಾವಣಾ ಅಭ್ಯರ್ಥಿಗಳು ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಸ್ವತಂತ್ರವಾಗಿ ಮಹಿಳೆಯರು ಕೆಲಸ ನಿಭಾಯಿಸಲು ಕಲಿಯಬೇಕು. ದೇವರು ಈ ಅವಕಾಶ ಕೊಟ್ಟಿದ್ದಾನೆ. ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುವ ದಿಟ್ಟತನ ತೋರಬೇಕು.

ಮೊದಲು ಯಜಮಾನರನ್ನು ಕೇಳಬೇಕು ಅನ್ನೋದನ್ನು ಬಿಡಿ. ಸ್ವತಂತ್ರವಾಗಿ ಆಲೋಚನೆ ಮಾಡಿ. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ. ನೀವೆಲ್ಲರೂ ಮುಂದೆ ಹೇಗೆ ಬೆಳೆಯಬೇಕು ಎಂಬುದನ್ನು ತೀರ್ಮಾನ ಮಾಡಿ. ಅನೇಕ‌ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ಕೂಡ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ದೊಡ್ಡ ಸಾಧನೆ ಮಾಡಿದ್ದಾರೆ. ಪುರುಷ ಪ್ರಧಾನ ಸಮಾಜ ನಮ್ಮದು. ಮಹಿಳೆಯರಿಗೆ ಅವಕಾಶ ಸಿಗೋದು ಕಡಿಮೆ. ಆದರೆ ನಾವು ಇಂಡಿಪೆಂಡೆಂಟ್ ಆಗಿ ಇರಬೇಕು. ಮಹಿಳೆಯರ ಬಗ್ಗೆ ಟೀಕೆ ಟಿಪ್ಪಣಿ ಹೆಚ್ಚು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ:

ಮಿಷನ್ 123 ಹಾಗೂ ಜನತಾ ಪರ್ವ 1.O ಕಾರ್ಯಗಾರದಲ್ಲಿ ಮೂರನೇ ದಿನ ಮಹಿಳಾ ಪ್ರತಿನಿಧಿಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಮತ್ತೊಂದು ಪ್ರಾತ್ಯಕ್ಷಿಕೆ ನೀಡಿ ಭವಿಷ್ಯದ ನಾಯಕಿಯರಿಗೆ ಭರವಸೆಯ ಹಾದಿ ತೋರಿದರು.

ಎಲ್​​ಈಡಿ ಪರದೆಯ ಮೇಲೆ ಮೂಡಿದ ಗ್ರಾಫಿಕ್ಸ್ ಮೂಲಕ ಎಲ್ಲಾ ಜಿಲ್ಲೆಗಳಿಂದ ಬಂದಿದ್ದ ಮಹಿಳೆಯರಿಗೆ ಪಕ್ಷ ಸಂಘಟನೆ, ಮುಂದಿನ ಚುನಾವಣೆ ಕಾರ್ಯತಂತ್ರ, ಸವಾಲುಗಳನ್ನು ಎದುರಿಸುವ ಪರಿ ಮುಂತಾದ ವಿಷಯಗಳ ಬಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾಹಿತಿ ನೀಡಿದರು.

ದೊಡ್ಡಗೌಡರು ಕೊಟ್ಟ ಮೀಸಲು:

ಮಾಜಿ ಪ್ರಧಾನಿ ದೇವೇಗೌಡ ಅವರು ಮಹಿಳೆಯರಿಗೆ ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಶೇ.50 ರಷ್ಟು ಮೀಸಲಾತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ್ದಾರೆ. ಶೇ.100 ಕ್ಕೆ 50% ಮೀಸಲಾತಿ ಮಾಡಿದ್ದಾರೆ. ಮಹಿಳೆಯರು ಕೇವಲ‌ ಮನೆಗೆ ಸೀಮಿತವಾಗಬಾರದು ಎಂಬ ದೃಷ್ಟಿಯಲ್ಲಿ ಹಲವಾರು ಕಾರ್ಯಕ್ರಮ ತರಲು ಪ್ರಯತ್ನಿಸಿದ್ದಾರೆ.

ಕಲಬುರಗಿಯಲ್ಲಿ 22 ಸ್ಥಾನಕ್ಕೆ ಮಹಿಳೆಯರು ಆಯ್ಕೆಯಾಗಿದ್ದಾರೆ. ಸ್ಥಳೀಯ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ ಎಂದರೆ ಅದಕ್ಕೆ ಕಾರಣ ದೇವೇಗೌಡರು. ಜತೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ, ಅಕ್ರಮಗಳಿಗೆ ತಡೆವೊಡ್ಡಬೇಕು. ದಿನ ಬೆಳಗಾದರೆ ನಮ್ಮ ಮನೆಗೆ ಹೆಣ್ಣು ಮಕ್ಕಳು ಬಂದು ಕಷ್ಟ ಹೇಳಿಕೊಳ್ಳುತ್ತಾರೆ. ಅವರ ದುಖಃ ದುಮ್ಮಾನ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಹೆಚ್​ಡಿಕೆ ತಿಳಿಸಿದರು.

ABOUT THE AUTHOR

...view details