ರಾಮನಗರ: ಮುಂದಿನ ವಿಧಾನಸಭೆ ಎದುರಿಸಲು ಪಕ್ಷ ಮತ್ತಷ್ಟು ಬಲಿಷ್ಠವಾಗಬೇಕಿದೆ. ಚನ್ನಪಟ್ಟಣದಲ್ಲಿ ನಮ್ಮ ಕಾರ್ಯಕರ್ತರು ಶಕ್ತಿಯುತವಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇಂದಿನಿಂದ ಚನ್ನಪಟ್ಟಣ ಕ್ಷೇತ್ರ ಪ್ರವಾಸ ಕೈಗೊಂಡಿರುವ ಅವರು ಕೆಂಗಲ್ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ನಮಗೆ ಯಾವುದೇ ಭಯವಿಲ್ಲ, ಕಾರ್ಯಕರ್ತರೇ ನಮ್ಮ ಶಕ್ತಿ: ನಿಖಿಲ್ ಕುಮಾರಸ್ವಾಮಿ - ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಪ್ರವಾಸ
ಇಂದಿನಿಂದ ಚನ್ನಪಟ್ಟಣ ಕ್ಷೇತ್ರ ಪ್ರವಾಸ ಕೈಗೊಂಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ಇದಕ್ಕೂ ಮುನ್ನ, ಬೃಹತ್ ಬೈಕ್ ರ್ಯಾಲಿ ಮೂಲಕ ನಿಖಿಲ್ ಅವರನ್ನು ಮೆರವಣಿಗೆ ಮೂಲಕ ಕರೆತಂದ ಕಾರ್ಯಕರ್ತರು, ಬೊಂಬೆನಾಡಿಗೆ ಭವ್ಯ ಸ್ವಾಗತ ನೀಡಿದರು. ಬಳಿಕ, ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಸ್ಥಳೀಯ ಜೆಡಿಎಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದೇನೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದೆ. ತಳಮಟ್ಟದಿಂದ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕೆಲಸ ಆಗಬೇಕಿದೆ ಎಂದರು.
ಚನ್ನಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ಇಲ್ಲಿಗೆ ನನ್ನನ್ನು ಆಹ್ವಾನಿಸಿದ್ದಾರೆ. ಅವರಿಗೆ ಮತ್ತಷ್ಟು ಬಲ ನೀಡುವ ಸಲುವಾಗಿ ಆಗಮಿಸಿದ್ದೇನೆ. ಕೆಲ ಮುಖಂಡರು ಪಕ್ಷ ತೊರೆದಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಆದರೆ ಮುಂದೆ ಜೆಡಿಎಸ್ ಪಕ್ಷವನ್ನು ಹಲವು ಮಂದಿ ಸೇರುವವರಿದ್ದಾರೆ. ನೀವೇ ಮುಂದಿನ ದಿನಗಳಲ್ಲಿ ಇದನ್ನು ನೋಡುತ್ತೀರಿ ಎಂದು ಹೇಳಿದರು.