ರಾಮನಗರ:ಹಲಾಲ್ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಬಂದರೆ ಚರ್ಚೆ ಮಾಡಬಹುದು. ಇವತ್ತು ಚುನಾವಣಾ ಸುಧಾರಣಾ ಬಗ್ಗೆ ಚರ್ಚೆ ಇದೆ. ಅಲ್ಲಿ ಅವಕಾಶ ಸಿಕ್ಕರೆ ಸಮಾಜದಲ್ಲಿ ಶಾಂತಿ ತರುವ ವಿಚಾರವಾಗಿ ಸಲಹೆ ಕೊಡ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಮನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮತ್ತು ಪುರೋಹಿತ ರಾಜ್ಯ ಸಭೆಯಲ್ಲಿ ಭಾಗವಹಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಗೆ ಹರಿಸದ ನೂರಾರು ಸಮಸ್ಯೆಗಳಿವೆ. ಅದನ್ನು ಬಿಟ್ಟು ಬೇಡವಾದ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಚುನಾವಣಾ ವರ್ಷ ಪ್ರಾರಂಭ ಆಗಿದೆ. ರಾಷ್ಟ್ರೀಯ ಪಕ್ಷಗಳ ನಾಯಕರು ಲಗ್ಗೆಯಿಟ್ಟು ಮತ ಪಡೆಯಲು ಪ್ರಾರಂಭ ಮಾಡುತ್ತಾರೆ. ಮೊದಲು ನಮ್ಮ ರಾಜ್ಯದ ನದಿ ನೀರಿನ ಸಮಸ್ಯೆ ಬಗೆಹರಿಸಿಕೊಂಡು ಬಂದು ಮತ ಕೇಳಲಿ. ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಕೆಲಸ ಮಾಡಲಿ ಎಂದರು.
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ನನ್ನ ಹೋರಾಟ ಇದ್ದು, ಮುಂದಿನ 10ನೇ ತಾರೀಖಿನಿಂದ ನಮ್ಮ ಸಂಘಟನೆ ಪ್ರಾರಂಭ ಆಗಲಿದೆ. ಹೆಚ್ಚು ಪ್ರಚಾರ ಮಾಡಿ ಹೇಳುವ ಬದಲು, ನಿಮಗೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಹೋರಾಟ ತಿಳಿಯಲಿದೆ ಎಂದರು.