ರಾಮನಗರ:ಮನವಿ ಸಲ್ಲಿಸಲು ಬಂದಿದ್ದ ವೇಳೆ ಸರಿಯಾಗಿ ಸ್ಪಂದಿಸಲಿಲ್ಲವೆಂದು ಆರೋಪಿಸಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಕಾರಿಗೆ ಅಡ್ಡವಾಗಿ ನಿಂತು ಘೇರಾವ್ ಹಾಕಿದರು.
ಸ್ವ ಕ್ಷೇತ್ರದಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತರ ಘೇರಾವ್ ರಾಮನಗರ ನಗರಸಭೆ ಕಾರ್ಯಾಲಯದಲ್ಲಿ ಇಂದು ಸಭೆ ನಡೆಸಲು ಶಾಸಕಿ ಅನಿತಾ ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ ಅರ್ಕಾವತಿ ಬಡಾವಣೆಯಲ್ಲಿರುವ ಗ್ಯಾಸ್ ಗೋಡೌನ್ ತೆರವಿಗೆ ಸ್ಥಳೀಯರು ಆಗ್ರಹಿಸಿದ್ದು ಹಲವು ಬಾರಿ ಹೋರಾಟ ಕೂಡ ನಡೆಸಿದ್ದರು. ಇಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಲು ಬಂದಿದ್ದರು. ಆಗ ಶಾಸಕರು ಸರಿಯಾಗಿ ಸ್ಪಂದಿಸಲಿಲ್ಲವೆಂದು ಸ್ಥಳೀಯರು ಶಾಸಕರ ಕಾರಿನ ಮುಂದೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಅನಿತಾ ಕುಮಾರಸ್ವಾಮಿ ಕಾಲಿಗೆ ಬಿದ್ದು, ಕಾರಿನ ಮುಂದೆ ಕುಳಿತರೂ ಯಾವುದಕ್ಕೂ ಸ್ಪಂದಿಸದ ಕಾರಣ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಸ್ಥಳೀಯ ನಿವಾಸಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಶಾಸಕರ ಭೇಟಿಗೆ ಬಂದಾಗ ಶಾಸಕಿಗೆ ಘೇರಾವ್ ಹಾಕಿದ್ದಕ್ಕೆ ರಾಮನಗರ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಹಾಗೂ ರಾಜು ಎಂಬುವರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರ ಮೇಲೂ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಕಿಡಿಕಾರಿದರು. ಇದೆಲ್ಲವನ್ನೂ ಗಮನಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಗಲಾಟೆ ನೋಡಲಾಗದೇ ಕಾರ್ ಹತ್ತಿ ಹೊರಟು ಹೋದ್ರು.