ರಾಮನಗರ :40 ವರ್ಷಗಳ ಹಿಂದೆ ನಾನು ವಿದೇಶಾಂಗ ಸೇವೆಗೆ ಸೇರಿಕೊಂಡಾಗ ಜಾಗತಿಕ ಮಟ್ಟದಲ್ಲಿ ಭಾರತದ ದನಿಯೇ ಇರಲಿಲ್ಲ. ಆದರೆ ಪ್ರಧಾನಿ ಮೋದಿಯವರ ದಕ್ಷ ನಾಯಕತ್ವದಿಂದಾಗಿ ಈಗ ನಮ್ಮ ದನಿಗೆ ಅಭೂತಪೂರ್ವ ಬೆಲೆ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಜಿಲ್ಲೆ ಹಾರೋಹಳ್ಳಿ ಬಳಿಯ ಜೈನ್ ವಿವಿ ಆವರಣದಲ್ಲಿ ನಡೆದ ಹರ್ ಘರ್ ತಿರಂಗಾ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಪ್ರಭಾತ್ ಪೇರಿ ನಡಿಗೆಯಲ್ಲಿ ಭಾಗವಹಿಸಿದರು. ಭಾರತದ ವಿದೇಶಾಂಗ ನೀತಿಯು ಹಿಂದೆ ರಕ್ಷಣಾತ್ಮಕವಾಗಿತ್ತು. ಈಗ ತೀಕ್ಣವಾಗಿದ್ದು, ಕೊರೋನಾ ಕಾಲದಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ಕಂಡು ದೊಡ್ಡ ದೇಶಗಳು ಕೂಡ ಬೆರಗಾಗಿವೆ ಎಂದರು.
ವಿದೇಶಾಂಗ ನೀತಿಯು ದೇಶದ ಜನರ ದಿನನಿತ್ಯದ ಬದುಕಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇದರಲ್ಲಿ ಭಾರತೀಯರ ಹಿತಾಸಕ್ತಿ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ನಾವು ತಾಳುವ ನಿಲುವು ನಿರ್ಣಾಯಕ ಪಾತ್ರ ವಹಿಸುತ್ತವೆ. ಎಂಟು ವರ್ಷಗಳಿಂದ ಈಚೆಗೆ ನಮ್ಮ ಯೋಗ, ಆಹಾರ, ಅಧ್ಯಾತ್ಮ, ಸಂಸ್ಕೃತಿ ಹಾಗೂ ಪರಂಪರೆಗಳಿಗೆ ವಿಶ್ವ ಮಟ್ಟದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಿದೆ ಎಂದು ವಿದೇಶಾಂಗ ಸಚಿವರು ಮಾಹಿತಿ ನೀಡಿದರು.
ಮೋದಿ ಅವರ ನಾಯಕತ್ವವು ಜಗತ್ತಿಗೇ ಗೊತ್ತಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಜಗತ್ತಿನ ನಾನಾ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 70 ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ. ಹಾಗೆಯೇ ವಿದೇಶಗಳಲ್ಲಿ ಓದುತ್ತಿರುವ 12 ಲಕ್ಷ ಭಾರತೀಯ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡುವುದು ಸಾಧ್ಯವಾಗಿದೆ ಎಂದು ವಿವರಿಸಿದರು.