ರಾಮನಗರ:ಕೋವಿಡ್-19 ಜಗತ್ತನ್ನೇ ಹೈರಾಣಾಗಿಸಿದೆ. ಸಮಾಜದ ಎಲ್ಲಾ ವರ್ಗಗಳೂ ಕೂಡ ಕೊರೊನಾ ಸಂಕಷ್ಠ ಎದುರಿಸಿದ್ದಲ್ಲದೆ ಲಾಕ್ಡೌನ್, ಸೀಲ್ಡೌನ್ನಂತಹ ಗಂಭೀರ ಪರಿಸ್ಥಿತಿಗಳನ್ನ ಎದುರಿಸಿದೆ. ಇದಕ್ಕೆ ಕಾರಾಗೃಹಗಳು ಹೊರತಾಗಿಲ್ಲ ಎಂದರೂ ತಪ್ಪಲ್ಲ.
ವಿಶೇಷವಾಗಿ ರಾಮನಗರ ಜಿಲ್ಲಾ ಕಾರಾಗೃಹ ಹಲವು ಅವಾಂತರಗಳಿಗೆ ಕಾರಣವಾಗಿದ್ದಂತೂ ನಿಜ. ಪಾದರಾಯನಪುರ ಗಲಾಟೆ ಆರೋಪಿಗಳನ್ನ ಕರೆತಂದಿದ್ದೇ ತಡ ಹಸಿರು ವಲಯದಲ್ಲಿದ್ದ ರಾಮನಗರಕ್ಕೆ ಆತಂಕ ಉಂಟಾಗಿತ್ತು. ಇಲ್ಲಿಗೆ ಕರೆತರುವ ಮುನ್ನ ಜೈಲಿನಲ್ಲಿದ್ದ ಸುಮರು 174 ಆರೋಪಿಗಳನ್ನ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ಪಾದರಾಯನಪುರ ಆರೋಪಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಆತಂಕ ಹುಟ್ಟಿಸಿತ್ತು. ಆ ಬಳಿಕ ಜೈಲು ಸಿಬ್ಬಂದಿಗಳಲ್ಲಿಯೂ ಕೂಡ ಪಾಸಿಟಿವ್ ಕಾಣಿಸಿಕೊಂಡು ಸುಮಾರು ಒಂದೂವರೆ ತಿಂಗಳು ಸೀಲ್ಡೌನ್ಗೆ ರಾಮನಗರ ಜಿಲ್ಲಾ ಕಾರಾಗೃಹ ಒಳಪಟ್ಟಿತ್ತು.
ಕೋವಿಡ್ ವೇಳೆ ಹಲವು ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದ್ದರೂ, ರಾಮನಗರದ ಎಲ್ಲ ಕೈದಿಗಳನ್ನ ಬೆಂಗಳೂರಿಗೆ ವರ್ಗಾಯಿಸಿದ್ದರಿಂದ ನಮ್ಮ ಪರಿಮಿತಿಯಲ್ಲಿರಲಿಲ್ಲ ಅಂತಾರೆ ಜೈಲಾಧಿಕಾರಿಗಳು. ಇದೀಗ ಕೊರೊನಾ ಕಟ್ಟುನಿಟ್ಟಿನ ನಿಯಮಗಳ ಸಡಿಲಿಕೆ ಮಾಡುವ ಮೂಲಕ ಪರಿಸ್ಥಿತಿ ಆತಂಕಗಳು ತಹಬದಿಗೆ ಬಂದಿದ್ದರೂ ಕೂಡ ಬೆಂಗಳೂರಿಗೆ ಸ್ಥಳಾಂತರ ಮಾಡಿದ್ದ ಕೈದಿಗಳನ್ನ ಇಲ್ಲಿಗೆ ಕರೆತಂದಿಲ್ಲ. ಆದರೆ ಕಳೆದ ಎರಡು-ಮೂರು ತಿಂಗಳಿನಿಂದ ಸುಮಾರು 44 ಮಂದಿ ವಿಚಾರಣಾಧೀನ ಕೈದಿಗಳು ಅಷ್ಟೇ ಇದೀಗ ಜೈಲಿನಲ್ಲಿದ್ದಾರೆ.